
ಮಂಗಳೂರು: ಮಳಿಗೆಯ ಒಳ ವಿನ್ಯಾಸ ಕಾಮಗಾರಿ ವೇಳೆ ವಿದ್ಯುತ್ ಶಾಕ್ ಸಂಭವಿಸಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಮೂಲತಃ ಪಜೀರು ಬೆಂಗೋಡಿ ಪದವು ನಿವಾಸಿ, ಸದ್ರಿ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿರುವ ಸಲ್ಮಾನ್ ಫಾರಿಶ್(20) ಮೃತ ಯುವಕ. ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ವಾಣಿಜ್ಯ ಮಳಿಗೆಯಲ್ಲಿ ಸಲ್ಮಾನ್ ಫಾರಿಶ್ ಮಾಲಕತ್ವದಲ್ಲಿ ನೂತನ(ಝೀರೋ) ವಸ್ತ್ರ ಮಳಿಗೆಯೊಂದು ಇದೇ ಶುಕ್ರವಾರ ಶುಭಾರಂಭಗೊಳ್ಳಲಿದ್ದು, ಆ ನಿಟ್ಟಿನಲ್ಲಿ ನೂತನ ಮಳಿಗೆಯ ಒಳ ವಿನ್ಯಾಸ ಕಾಮಗಾರಿ ನಡೆಯುತ್ತಿತ್ತು. ಭಾನುವಾರ ರಾತ್ರಿಯೂ ಮಳಿಗೆಯ ಒಳಗಡೆ ಇಲೆಕ್ಟ್ರ್ರೀಷಿಯನ್ ಕೆಲಸ ಭರದಲ್ಲಿ ನಡೆಯುತ್ತಿತ್ತು.
ಭಾನುವಾರ ನಡುರಾತ್ರಿ ಸುಮಾರು 1.30 ಗಂಟೆ ವೇಳೆ ಸಲ್ಮಾನ್ ಗೆ ವಿದ್ಯುತ್ ಆಘಾತವಾಗಿದ್ದು, ಜೊತೆಗಿದ್ದ ಕಾರ್ಮಿಕರು ಕೂಡಲೇ ಆತನನ್ನ ಆಟೋ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆಸ್ಪತ್ರೆ ದಾರಿಯಲ್ಲಿ ಸಲ್ಮಾನ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ







