
ಕಂಡ್ಲೂರು ಪೇಟೆಯ ಸೆಲೂನ್ ಒಂದರಲ್ಲಿ ಬಿಹಾರ ಮೂಲದ 11ರ ಹರೆಯದ ಬಾಲಕ ಹೇಳಿದ ವಿಷಯವನ್ನು ವೀಡಿಯೋ ಮಾಡಿ ಗಲಾಟೆ ಮಾಡುವ ಉದ್ದೇಶದಿಂದ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಕಂಡ್ಲೂರು ಜನತಾ ಕಾಲನಿಯ ಶಶಾಂಕ್ ಭಂಡಾರಿ (30) ಹಾಗೂ ಕಾವ್ರಾಡಿ ಗ್ರಾಮದ ಮರಾಸಿಯ ಪ್ರಮೋದ ಡಿ’ಸೋಜಾ (25) ಅವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಸೆಲೂನ್ ಎದುರುಗಡೆ ಜನರು ಗುಂಪುಗೋಡಿ ಬೆದರಿಕೆ ಹಾಕಿರುವ ಬಗ್ಗೆ ಸೆಲೂನ್ ಮಾಲಕ ಶಶಾಂಕ್ ಭಂಡಾರಿ ನೀಡಿರುವ ದೂರಿನಂತೆ ಇನ್ನೊಂದು ಪ್ರಕರಣ ಕೂಡ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20-30 ಜನರನ್ನು ಗುರುತಿಸಲಾಗಿದ್ದು, ಅವರ ವಿರುದ್ಧವೂ ಸಹ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ







