
ಡ್ರಗ್ ರಹಿತ ಸಮಾಜ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ಪೊಲೀಸರು ಆರಂಭಿಸಿರುವ ‘ಸನ್ಮಿತ್ರ’ ಉಪಕ್ರಮದಡಿ ಪಶ್ಚಿಮ ಬೆಂಗಳೂರು ವಿಭಾಗದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ ತಪಾಸಣೆಯಲ್ಲಿ 31 ವಿದ್ಯಾರ್ಥಿಗಳು ಡ್ರಗ್ ಸೇವಿಸಿರುವುದು ಪತ್ತೆಯಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಕಾರ್ಯಾಚರಣೆಯ ವೇಳೆ 1,200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಅವುಗಳಲ್ಲಿ 585 ಸ್ಯಾಂಪಲ್ಗಳನ್ನು ಯಾದೃಚ್ಛಿಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 31 ವಿದ್ಯಾರ್ಥಿಗಳ ವರದಿ ಪಾಸಿಟಿವ್ ಎಂದು ದೃಢಪಟ್ಟಿದೆ.
ಡ್ರಗ್ ಸೇವನೆ ಪತ್ತೆಯಾದ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ತಜ್ಞರಿಂದ ಕೌನ್ಸೆಲಿಂಗ್ ಹಾಗೂ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹೆಸರು ಮತ್ತು ಕುಟುಂಬದ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿರಿಸಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಮಾತನಾಡಿ, ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರ ಕಾಲೇಜುಗಳಲ್ಲೂ ಈ ಅಭಿಯಾನ ಮುಂದುವರಿಯಲಿದೆ. ಪೋಷಕರನ್ನೂ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆಗೆ ಶಿಕ್ಷಣ ಸಂಸ್ಥೆಗಳ ಮ್ಯಾನೇಜ್ಮೆಂಟ್‌ನಿಂದ ಅನುಮತಿ ಹಾಗೂ ‘ನೋ ಆಬ್ಜೆಕ್ಷನ್ ಸರ್ಟಿಫಿಕೇಟ್’ ಪಡೆದು ಆರು ಶಿಕ್ಷಣ ಸಂಸ್ಥೆಗಳು ಮತ್ತು ಎರಡು ವಸತಿನಿಲಯಗಳಲ್ಲಿ N-MASS (ನಾರ್ಕೋಟಿಕ್ಸ್ ಮಾನಿಟರಿಂಗ್, ಅಸಿಸ್ಟನ್ಸ್ ಅಂಡ್ ಸ್ಕ್ರೀನಿಂಗ್ ಸಿಸ್ಟಮ್) ಮೂಲಕ ತಪಾಸಣೆ ನಡೆಸಲಾಗಿದೆ.
ಪರೀಕ್ಷಾ ಪ್ರಕ್ರಿಯೆಯಲ್ಲಿ ಪುಣ್ಯ ಆಸ್ಪತ್ರೆ, ಪದ್ಮದೇವಯ್ಯ ಆಸ್ಪತ್ರೆ, KADE ಆಸ್ಪತ್ರೆ, ಶರಾವತಿ ಆಸ್ಪತ್ರೆ, ಶ್ರೀ ಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕಾಂಗರೂ ಕೇರ್ ಆಸ್ಪತ್ರೆಗಳ ವೈದ್ಯರು ಹಾಗೂ ತಾಂತ್ರಿಕ ಸಿಬ್ಬಂದಿ ಸಹಕರಿಸಿದ್ದಾರೆ ಎಂದು ವರದಿಯಾಗಿದೆ.









