
ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅಂಡಾಣು ಪಡೆದು, ಬಾಡಿಗೆ ತಾಯ್ತನದ ಅಕ್ರಮ ವ್ಯವಹಾರ ನಡೆಸುತ್ತಿದ್ದ ನಾಸಿಕ್ ಐವಿಎಫ್ ಕೇಂದ್ರವನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾ ಸಮಿತಿಯನ್ನು ರಚಿಸಲಾಗಿದೆ.
ಅಂಡಾಣುವನ್ನು ಅಕ್ರಮವಾಗಿ ಪಡೆದು ನಂತರ ಮಾರಾಟ ಮಾಡುತ್ತಿದ್ದ ಪ್ರಕರಣವು ಠಾಣೆ ಜಿಲ್ಲೆಯ ಬದ್ಲಾಪುರದಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿತ್ತು.
ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದು ‘ಮಾಲತಿ ಐವಿಎಫ್ ಕೇಂದ್ರ’ದಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ನಾಸಿಕ್‌ನ ಮಹಾ ನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಕೇಂದ್ರವನ್ನು ಮುಚ್ಚಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನಾಸಿಕ್‌ನ ಮುಂಬೈ ನಾಕಾ ಪ್ರದೇಶದಲ್ಲಿರುವ ಐವಿಎಫ್ ಕೇಂದ್ರದ ಮೇಲೆ ಬುಧವಾರ ದಾಳಿ ನಡೆಸಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದಾದ ಬಳಿಕ ಐವಿಎಫ್ ಕೇಂದ್ರದ ನೋಂದಣಿಯನ್ನು ರದ್ದುಗೊಳಿಸಲಾಗಿದ್ದು, ಬೀಗಮುದ್ರೆ ಹಾಕಲಾಗಿದೆ’ ಎಂದು ಹೇಳಿದ್ದಾರೆ.
ವಿಸ್ತೃತ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದ್ದು, ಐವಿಎಫ್ ಕೇಂದ್ರವು ನಿಯಾಮಗಳಿಗಳನ್ನು ಉಲ್ಲಂಘಿಸಿದ ಕುರಿತು ವರದಿ ನೀಡಲಿದೆ. ಕೇಂದ್ರದಲ್ಲಿ ಹಲವು ಅಕ್ರಮಗಳು ನಡೆದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೇಂದ್ರವನ್ನು ಮುಚ್ಚಲಾಗಿದ್ದು, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಾಸಿಕ್ ಆರೋಗ್ಯ ಇಲಾಖೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜಯ್‌ಕುಮಾರ್ ದೇವಕರ್ ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ: ಅಂಡಾಣು ಮಾರಾಟ ಮಾಡಿದರೂ ಕೂಡ ನೀಡಿದ ವಾಗ್ದಾನದಂತೆ ಹಣ ನೀಡಿಲ್ಲ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು ಪ್ರಮುಖ ಸೂತ್ರಧಾರಿ ಸುಲಕ್ಷಣ ಗಡೇಕರ್ (44) ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಹಾರ್ಮೊನಲ್ ಇಂಜೆಕ್ಷನ್‌ಗಳು ಪತ್ತೆಯಾಗಿತ್ತು. ಇದಾದ ಬಳಿಕ ಅಕ್ರಮದಲ್ಲಿ ಭಾಗಿಯಾಗಿದ್ದ ಅಶ್ವಿನಿ ಛಬುಸ್ಕವಾರ್ (29) ಮಂಜುಷಾ ವಾಖಂಡೆ (46) ಅವರನ್ನು ಬಂಧಿಸಲಾಗಿತ್ತು.









