ಮಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಶಾಂತಿಯ ಹಿನ್ನೆಲೆಯಲ್ಲಿ ವಿಶ್ವಶಾಂತಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಉಪವಾಸ ಆಚರಿಸುವಂತೆ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಭಕ್ತಾದಿಗಳಿಗೆ ಕರೆ ನೀಡಿದ್ದಾರೆ.
ಗುರುವಾರ (ಮಾ.5) ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಅವರು ಈ ಮನವಿ ಮಾಡಿದ್ದು, ಭಾರತೀಯ ಕ್ಯಾಥೋಲಿಕ್ ಬಿಷಪ್‌ಗಳ ಒಕ್ಕೂಟದ (CCBI) ಅಧ್ಯಕ್ಷರಾದ ಕಾರ್ಡಿನಲ್ ಡಾ. ಫಿಲಿಪ್ ನೇರಿ ಫೆರಾವೊ ಹೊರಡಿಸಿದ ಸುತ್ತೋಲೆಯನ್ನು ಉಲ್ಲೇಖಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಉಂಟಾಗುತ್ತಿರುವ ಅಪಾರ ಜೀವಹಾನಿ ಮತ್ತು ಮೂಲಸೌಕರ್ಯಗಳ ನಾಶದ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 8ರಂದು ಮಧ್ಯಪ್ರಾಚ್ಯದ ಶಾಂತಿಗಾಗಿ ಮತ್ತು ಅಮಾಯಕರ ರಕ್ಷಣೆಗಾಗಿ ‘ವಿಶೇಷ ಪ್ರಾರ್ಥನಾ ದಿನ’ವಾಗಿ ಆಚರಿಸಲು ಸೂಚಿಸಲಾಗಿದೆ. ಅದೇ ರೀತಿ ಮಾರ್ಚ್ 8ರಿಂದ 14ರವರೆಗೆ ಪ್ರತಿದಿನ ಶಾಂತಿಗಾಗಿ ‘ಪವಿತ್ರ ರೋಜರಿ’ (ಜಪಸರ) ಪ್ರಾರ್ಥನೆ ನಡೆಸುವಂತೆ ತಿಳಿಸಲಾಗಿದೆ.

ಮಾರ್ಚ್ 13ರಂದು ‘ಉಪವಾಸ ಮತ್ತು ಪ್ರಾರ್ಥನಾ ದಿನ’ವಾಗಿ ಆಚರಿಸಿ ಯುದ್ಧ ಪೀಡಿತರ ಸುರಕ್ಷತೆ ಹಾಗೂ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಲು ಕರೆ ನೀಡಲಾಗಿದೆ.
ಮಧ್ಯಪ್ರಾಚ್ಯ ದೇಶಗಳಿಗೆ ಉದ್ಯೋಗಕ್ಕಾಗಿ ತೆರಳಿರುವ ಭಾರತದ ಜನರು ಭಯದ ನೆರಳಿನಲ್ಲಿ ಬದುಕುತ್ತಿರುವ ಸ್ಥಿತಿಯನ್ನು ಉಲ್ಲೇಖಿಸಿದ ಬಿಷಪ್ ಅವರು, ಜಾಗತಿಕ ನಾಯಕರು ಮಾತುಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಲಿ ಎಂದು ಆಶಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!