
ಪುತ್ತೂರು: ಸೂಕ್ತ ಶಿಕ್ಷಣ ಹಾಗೂ ಪೂರಕ ವಾತಾವರಣ ದೊರೆತರೆ ಪ್ರತಿಯೊಬ್ಬ ಮಹಿಳೆಯೂ ಸುನಿತಾ ವಿಲಿಯಮ್ಸ್‌ರಂತೆ ಬಾಹ್ಯಾಕಾಶಕ್ಕೂ ಏರಬಲ್ಲ ಸಾಮರ್ಥ್ಯ ಹೊಂದಿದ್ದಾಳೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರಕೃತಿ ಕಲ್ಯಾಣಪುರ ಹೇಳಿದರು.
ಅವರು ಅಧಿವಕ್ತಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಹಿಳಾ ಬಂಧುತ್ವ ವೇದಿಕೆ, ಪುತ್ತೂರು ಇವರ ಸಹಯೋಗದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಚುಂಚುಶ್ರೀ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಪ್ರಗತಿಗೆ ಸಮಾಜದ ಸಮಗ್ರ ಬೆಂಬಲ ಅಗತ್ಯವಿದ್ದು, ಆತ್ಮವಿಶ್ವಾಸ ಮತ್ತು ಅವಕಾಶಗಳು ಅವರನ್ನು ಉನ್ನತ ಸ್ಥಾನಗಳಿಗೆ ಕೊಂಡೊಯ್ಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧಿವಕ್ತಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪಲತಾ ಯು.ಕೆ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದು, ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಳತಿಮೊಗೇರು ಮುಖ್ಯೋಪಾಧ್ಯಾಯೆ ಶ್ರೀಮತಿ ಸಂಧ್ಯಾರಾಣಿ ಹಾಗೂ ಮಹಿಳಾ ಬಂಧುತ್ವ ವೇದಿಕೆಯ ಸಂಚಾಲಕಿ ಶ್ರೀಮತಿ ಸುಮಂಗಲ ಶೆಣೈ ಉಪಸ್ಥಿತರಿದ್ದರು. ಬನ್ನೂರು ಗ್ರಾಮ ಪಂಚಾಯತ್‌ನ ಸ್ವಚ್ಚವಾಹಿನಿ ಕಾರ್ಯಕರ್ತೆ ಶ್ರೀಮತಿ ಗಿರಿಜಾ ಶಿವಪ್ಪ ನಾಯ್ಕ ಅವರಿಗೆ ಗೌರವ ಸಮರ್ಪಿಸಲಾಯಿತು.
ಅಧಿವಕ್ತಾ ಪರಿಷತ್ ಪುತ್ತೂರು ತಾಲೂಕು ಕಾರ್ಯದರ್ಶಿ ಶ್ರೀಮತಿ ಪೂಜಾ ಬೆತ್ತಾಡಿ ಸ್ವಾಗತಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ವರ್ಷ ಪ್ರಾರ್ಥಿಸಿದರು. ನ್ಯಾಯವಾದಿ ಶ್ರೀಮತಿ ಚಂದ್ರಾವತಿ ಟಿ. ಅಂಚನ್ ವಂದಿಸಿದರು. ನ್ಯಾಯವಾದಿಗಳಾದ ಕು. ಅರ್ಪಿತ ಪ್ರಶಾಂತ್ ಮತ್ತು ಫಮಿದಾ ಅಕ್ತರ್ ಕಾರ್ಯಕ್ರಮ ನಿರ್ವಹಿಸಿದರು.
ನಂತರ ನಡೆದ ಕಾರ್ಯಗಾರದಲ್ಲಿ ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ಪ್ರೀಮಿ ಫೆರ್ನಾಂಡಿಸ್ ಮಹಿಳೆಯರ ಹಕ್ಕುಗಳು ಹಾಗೂ ಸಬಲೀಕರಣ ಕುರಿತಂತೆ ಅರಿವು ಮೂಡಿಸಿದರು. ಎರಡನೇ ಅವಧಿಯಲ್ಲಿ ಅಧಿವಕ್ತಾ ಪರಿಷತ್ ಮಂಗಳೂರು ತಾಲೂಕು ಅಧ್ಯಕ್ಷೆ ಶ್ರೀಮತಿ ಆಶಾ ಪಿ. ರೈ ‘ಮಹಿಳೆ: ದೃಷ್ಟಿ ಮತ್ತು ದಿಕ್ಕು’ ವಿಷಯವಾಗಿ ಉಪನ್ಯಾಸ ನೀಡಿದರು.
ಸಮಾರೋಪ ಭಾಷಣವನ್ನು ಅಧಿವಕ್ತಾ ಪರಿಷತ್ ಜಿಲ್ಲಾಧ್ಯಕ್ಷ ಶ್ರೀ ಅನಿಲ್ ಕುಮಾರ್ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಶ್ರೀ ಜಯಪ್ರಕಾಶ್ ಭಂಡಾರಿ ಧನ್ಯವಾದ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಡಿ.ಪಿ., ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಜಯಪ್ರಕಾಶ್ ಎನ್., ಕಾರ್ಯದರ್ಶಿ ದೀಪಕ್ ಹಾಗೂ ನ್ಯಾಯವಾದಿ ಚಿದಾನಂದ ಬೈಲಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.









