
ಪುತ್ತೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಣ್ಣು ಅವರನ್ನು ಹೊಸಕೋಟೆ ಉಪವಿಭಾಗ ಲೋಕೋಪಯೋಗಿ ಇಲಾಖೆಗೆ ಚಾಲಕರಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಣ್ಣುವರ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿಬಂದಿದ್ದವು ಎನ್ನಲಾಗಿದೆ. ಇತ್ತೀಚೆಗೆ ಹಾರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ವಾಗ್ವಾದ ನಡೆಸಿ ಬೆದರಿಕೆ ಒಡ್ಡಿದ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಶಾಲೆಯ ಪೋಷಕರು ಮತ್ತು ಶಿಕ್ಷಕರು ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಅಣ್ಣುವರನ್ನು ವರ್ಗಾವಣೆ ಮಾಡುವಂತೆ ಹಾರಾಡಿ ಶಾಲಾ ಪೋಷಕರ ನಿಯೋಗ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದರು. ಇದೀಗ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿದೆ.









