ಬಂಟ್ವಾಳ: ಸಜಿಪಪಡು ಗ್ರಾಮದ ತಲೆಮೊಗರು ಮಸೀದಿಯಲ್ಲಿ ಆಡಳಿತ ವಿಚಾರದಲ್ಲಿ ತಕರಾರು ಏರ್ಪಟ್ಟು ಎರಡು ತಂಡಗಳು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧಿಸಿ ಮೂರು ಪ್ರತ್ಯೇಕ ಪ್ರಕರಣ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಮೊದಲ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ನವಾಝ್ (42) ಎಂಬವರು ನೀಡಿದ ದೂರಿನಂತೆ ಮಾರ್ಚ್ 22 ರಂದು ಬೆಳಿಗ್ಗೆ ಇವರು ಮತ್ತು ಅವರ ಸಂಬಂಧಿ ದಾವೂದ್ ಜೊತೆಯಲ್ಲಿ ತಲೆಮೊಗರು ಮಸೀದಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಕತ್ ಎಂಬಾತನ ಅಂಗಡಿಯ ಬಳಿ ಆರೋಪಿತರಾದ ಶೌಕತ್, ಇಸಾಕ್, ಶಫೀಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಹಾಗೂ ನಿಝಾಲ್ ಎಂಬವರು ಗುಂಪು ಕಟ್ಟಿಕೊಂಡು ನಿಂತಿದ್ದು, ನವಾಝ್ ಹಾಗೂ ದಾವೂದ್ ಸ್ಥಳಕ್ಕೆ ಬಂದಾಗ ಆರೋಪಿಗಳು ಮಸೀದಿಯ ವಿಚಾರದಲ್ಲಿ ತಕರಾರು ತೆಗೆದು, ಅವಾಚ್ಯವಾಗಿ ನಿಂದಿಸಿ, ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ನವಾಝ್ ಹಾಗೂ ದಾವೂದ್ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡನೇ ನೇ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ಗಫೂರ್ (48) ಎಂಬವರು ನೀಡಿದ ದೂರಿನಂತೆ, ಆರೋಪಿ ಗಳಾದ ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್, ಅಶ್ರಫ್ ಸಾಹೇಬ್ ಎಂಬವರು ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿ ಗಫೂರ್ ಅವರನ್ನು ತಡೆದು ನಿಲ್ಲಿಸಿ ಬೈದು, ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದ್ದು, ಹಲ್ಲೆಯಿಂದ ಗಾಯಗೊಂಡ ಗಫೂರ್ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಘಟನೆಗೆ ಸಂಬಂಧಿಸಿದಂತೆ 3 ನೇ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಶೌಕತ್ ಆಲಿ (40) ಎಂಬವರು ನೀಡಿದ ದೂರಿನಂತೆ ಶೌಕತ್ ಅವರು ಮಾ. 22 ರಂದು ಬೆಳಿಗ್ಗೆ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ ಆರೋಪಿಗಳಾದ ದಾವೂದ್, ಜುಬೈರ್, ಸೈದುದ್ದೀನ್, ನವಾಝ್, ಗಫೂರ್, ಶರೀಫ್, ಆಶಿಕ್ ಎಂಬವರು ಅಂಗಡಿಗೆ ಬಂದು ಮಸೀದಿ ವಿಚಾರದಲ್ಲಿ ತಕರಾರು ತೆಗೆದು ಶೌಕತ್ ಅವರ ಸಂಬಂಧಿ ರಬಿಯತ್ ಅವರಿಗೆ ಹಲ್ಲೆ ನಡೆಸಿರುತ್ತಾರೆ‌ ಎಂದು ದೂರಲಾಗಿದೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಸಫಾನಾ, ನಿಜಾಲ್, ಇಸಾಕ್, ಅಶ್ರಫ್ ಎಂಬವರಿಗೆ ಹಾಗೂ ಶೌಕತ್ ಅವರಿಗೂ ಅವ್ಯಾಚವಾಗಿ ಬೈದು ತಲವಾರಿನಿಂದ ಹಲ್ಲೆಗೆ ಯತ್ನಿಸಿರುತ್ತಾರೆ ಎನ್ನಲಾಗಿದ್ದು, ಈ ವೇಳೆ ಗಲಾಟೆ ಬಿಡಿಸಲು ಬಂದ ಸಂಬಂಧಿ ಆಯಿಷಾ ಎಂಬವರಿಗೆ ಆರೋಪಿಗಳು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಇತ್ತಂಡಗಳ ಪೈಕಿ ಗಾಯಾಳುಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯ ಆಗುವಂತಹ ಗಾಯಗಳಾಗಿರುವುದಿಲ್ಲ. ಸದ್ರಿ ಗಾಯಾಳುಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!