ಮೋಸ ಮಾಡೋರು ಇರುವವರೆಗೂ ಮೋಸ ಹೋಗುವವರು ಇದ್ದೇ ಇರುತ್ತಾರೆ ಅನ್ನೋ ಮಾತು ಆಗಾಗ ನಿಜವಾಗ್ತಾನೆ ಇದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡ್ತಿದೆ. ಇಂಜಿನಿಯರಿಂಗ್, ಡಬಲ್ ಡಿಗ್ರಿ ತೆಗೆದುಕೊಂಡಿರೋರು ಕೆಲಸ (Job) ಇಲ್ಲದೆ ಪರದಾಡ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಿರುದ್ಯೋಗಿಗಳಿಗೆ ಕೆಲಸ ಕೊಡಿಸೋದಾಗಿ ನಂಬಿಸಿ ಹಣ ಲೂಟಿ ಮಾಡ್ತಿದ್ದಾರೆ.

ಇಂಥಹದ್ದೇ ಕೇಸ್ನಲ್ಲಿ ಕೋಟಿ ಕೋಟಿ ವಂಚನೆ (Fraud) ಮಾಡಿದ ಆರೋಪದ ಮೇಲೆ ದಂಪತಿ (Couple) ಅರೆಸ್ಟ್ ಆಗಿದ್ದಾರೆ. ಏನು ಈ ಖತರ್ನಾಕ್ ಕಪಲ್ ಕಥೆ?

ಕೆಲಸದ ಹೆಸರಲ್ಲಿ ಕೋಟಿ ಕೋಟಿ ಲೂಟಿ!

ಸರ್ಕಾರಿ ಕೆಲಸ ಅಂದ್ರೆ ಸಾಕು ಜನರು ಮುಗಿಬೀಳ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ದಂಪತಿ ಕೋರ್ಟ್ನಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಭಾರೀ ವಂಚನೆ ಜಾಲವನ್ನೇ ಎಣೆದಿದ್ದಾರೆ. ನಿರೋದ್ಯೋಗಿಗಳು ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅಮಾಯಕರನ್ನ ಟಾರ್ಗೆಟ್ ಮಾಡ್ತಿದ್ದ ದಂಪತಿ, ಮಾತಿನಲ್ಲೇ ಮರಳು ಮಾಡ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

ಕೋರ್ಟ್ನಲ್ಲಿ ಕೆಲಸ, 500 ಜನರಿಗೆ ವಂಚನೆ!

ಜೈಸನ್ ಡಿಸೋಜಾ, ಲವೀನಾ ಎಂಬ ಖತರ್ನಾಕ್ ದಂಪತಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ನಲ್ಲಿ ಡಿ ಗ್ರೂಪ್ ಕೆಲಸ ಕೊಡಿಸೋದಾಗಿ ಈ ದಂಪತಿ ಒಬ್ಬೊಬ್ಬರಿಂದ 10 ರಿಂದ 25 ಲಕ್ಷದ ವರೆಗೆ ಹಣ ಪಡೆದು ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗೆ ಸುಮಾರು 500ಕ್ಕೂ ಹೆಚ್ಚು ಜನರಿಂದ ಹಣ ಪಡೆದಿರುವ ಎನ್ನಲಾಗ್ತಿದೆ.

ನ್ಯಾಯಾಧೀಶರ ಸಹಿ ನಕಲು

ದಂಪತಿ ಮೇಲೆ 25 ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಅನೇಕರಿಗೆ ಕೆಲಸದ ಆಸೆ ತೋರಿಸಿ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಆರ್ಡರ್ ಪ್ರತಿ ಎಂದು ನಂಬಿಸಿದ್ದ ಕಿಲಾಡಿ ಜೋಡಿ ಇದೀಗ ಕಂಬಿ ಹಿಂದೆ ನಿಂತಿದೆ.

ಫೋನ್ ರಿಸೀವ್ ಮಾಡದೇ ಕಳ್ಳಾಟ

ದುಡ್ಡು ಕೊಟ್ಟವರು ಕೆಲಸ ಬಗ್ಗೆ ಕೇಳಿದ್ರೆ ನಾಳೆ, ನಾಡಿದ್ದು ಎಂದು ಕಥೆ ಹೇಳ್ತಿದ್ರಂತೆ. ಕೊನೆಗೆ ಫೋನ್ ರಿಸೀವ್ ಮಾಡದೇ ಕಳ್ಳಾಟವಾಡಿದ್ದಾರೆ. ಬಳಿಕ ಮೋಸ ಹೋಗಿರೋದು ಗೊತ್ತಾಗಿ ಸಂತ್ರಸ್ಥರು ಸಿಸಿಬಿಗೆ ದೂರು ನೀಡಿದ್ದಾರೆ. ಸದ್ಯ ಇಬ್ಬರನ್ನ ಬಂಧಿಸಿರೋ ದಂಪತಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಹಿಂದೆ ಕೂಡ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಸಂಬಂಧ ದಂಪತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಕೂಡ ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚಿಸಿದ್ದ ಜೋಡಿ, 2024 ರಲ್ಲಿ ಬಂಧನಕ್ಕೊಳಗಾಗಿ ರಿಲೀಸ್ ಆಗಿದ್ರು. ಹೊರಗೆ ಬಂದು ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ.

ಏಜೆಂಟ್ ಮೂಲಕ ಹಣ ವಸೂಲಿ

ವಂಚನೆಗಾಗಿ ಒಂದು ಜಾಲವನ್ನೇ ರೆಡಿ ಮಾಡಿಕೊಂಡಿದ್ದ ಆಸಾಮಿಗಳು, ಜನರನ್ನ ನಂಬಿಸಲು, ಹಣ ಪಡೆಯಲು ಏಜೆಂಟ್ ಗಳ ನೇಮಕ ಮಾಡಿದ್ರು. ಸ್ವಲ್ಪ ಹಣ ಏಜೆಂಟ್ ಗಳು ಪಡೆದು ಕೊಂಡು ಉಳಿದ ಹಣ ಜೈಸನ್ ದಂಪತಿಗೆ ನೀಡ್ತಿದ್ರು.

ಅಲ್ಲದೇ ದಾಖಲೆ ಪರಿಶೀಲನೆ ಅಂತ ಖಾಸಗಿ ಹೋಟೆಲ್ ಗೆ ಕರೆಸಿಕೊಳ್ತಿದ್ರು. ಅಲ್ಲಿ ಉಳಿದವರಿಗೆ ಆಫರ್ ಲೆಟರ್ ಬಂದಿದೆ ಎಂದು ನಕಲಿ ಆಫರ್ ಲೆಟರ್ ತೋರಿಸಿ ಕೆಲಸ ಕೊಡಿಸದೆ‌ ಸಬೂಬು ಹೇಳ್ತಿದ್ರು ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ಸಿಸಿಬಿ ಪೊಲೀಸರಿಂದ ದಂಪತಿ ವಿಚಾರಣೆ ಮುಂದುವರೆದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!