ಇ ರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇರಾನ್ ಇಸ್ರೇಲ್‌ನ ಕೇಂದ್ರ ಭಾಗವನ್ನು ಗುರಿಯಾಗಿಸಿ ಕ್ಲಸ್ಟರ್ ಬಾಂಬ್‌ಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್ ನಗರದಲ್ಲಿ ಗಂಭೀರ ಹಾನಿಯಾಗಿದೆ.
ಇರಾನ್ ಬಿಡುಗಡೆ ಮಾಡಿದ ಕ್ಷಿಪಣಿಗಳು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ (ಐರನ್ ಡೋಮ್) ಅನ್ನು ಭೇದಿಸಿ ಅಪ್ಪಳಿಸಿವೆ. ಕ್ಷಿಪಣಿಗಳು ಆಕಾಶದಲ್ಲೇ ಸ್ಫೋಟಗೊಂಡು ಕ್ಲಸ್ಟರ್ ಬಾಂಬ್‌ಗಳು ವ್ಯಾಪಕ ಪ್ರದೇಶದಲ್ಲಿ ಚದುರಿದ್ದರಿಂದ ಜನವಸತಿ ಪ್ರದೇಶಗಳ ಮೇಲೆ ಬಾಂಬ್‌ಗಳು ಬಿದ್ದಿವೆ. ಇದರಿಂದಾಗಿ ಟೆಲ್ ಅವೀವ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತಾರು ಕಟ್ಟಡಗಳು, ನೂರಾರು ವಾಹನಗಳು ಧ್ವಂಸವಾಗಿವೆ. ಸ್ಥಳದಲ್ಲಿ ದಟ್ಟ ಹೊಗೆಯು ಕಂಡುಬಂದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಈ ದಾಳಿಯಲ್ಲಿ ಕನಿಷ್ಠ ೬ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟ್ಟು ೧೫ಕ್ಕೂ ಹೆಚ್ಚು ಜನರು ಗಾಯಗಳಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್ ವಾಯು ರಕ್ಷಣಾ ವ್ಯವಸ್ಥೆಯು ಕೆಲವು ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿದರೂ, ಕ್ಲಸ್ಟರ್ ಬಾಂಬ್‌ಗಳು ವ್ಯಾಪಕವಾಗಿ ಹರಡುವುದರಿಂದ ಜನವಸತಿ ಪ್ರದೇಶಗಳಲ್ಲಿ ಹಾನಿ ತಪ್ಪಿಸಲು ಸಾಧ್ಯವಾಗಿಲ್ಲ.
ಇಸ್ರೇಲ್ ಪೊಲೀಸ್ ಮತ್ತು ತುರ್ತು ಸೇವಾ ಸಂಸ್ಥೆಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿವೆ. ದಾಳಿಯು ಇಸ್ರೇಲ್‌ನ ಕೇಂದ್ರ ಭಾಗವನ್ನು ಗುರಿಯಾಗಿಸಿರುವುದು ಜನರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.
ಈ ದಾಳಿಯು ಇರಾನ್-ಇಸ್ರೇಲ್ ನಡುವಿನ ಯುದ್ಧವು ಮತ್ತಷ್ಟು ತೀವ್ರಗೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ಎರಡೂ ಕಡೆಯಿಂದ ಪ್ರತೀಕಾರದ ಮಾತುಗಳು ಕೇಳಿಬರುತ್ತಿವೆ.














