ಉಡುಪಿ, ಮಾ.24: ಬಡಾನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಸಲ್ಲಿಸಿದ್ದ ಏಕ ವಿನ್ಯಾಸ (ಸಿಂಗಲ್ ಲೇಔಟ್) ನಕ್ಷೆ ಅನುಮೋದನೆಗೆ ವಿಳಂಬ ಮಾಡುತ್ತಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ವಿರೋಧಿಸಿ ಮಾಜಿ ಶಾಸಕ ರಘುಪತಿ ಭಟ್ ಅವರು ಸೋಮವಾರ ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ 12 ಗಂಟೆಗಳೊಳಗೆ ಫಲ ನೀಡಿತು.
ಪ್ರತಿಭಟನೆಗೆ ಸ್ಪಂದಿಸಿದ ನಗರಾಭಿವೃದ್ಧಿ ಪ್ರಾಧಿಕಾರವು ಸೋಮವಾರ ಅಪರಾಹ್ನ ಸಿಂಗಲ್ ಲೇಔಟ್‌ಗೆ ತಾತ್ಕಾಲಿಕ ಅನುಮತಿ ಪತ್ರ ನೀಡಿದೆ. ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಿದ ಬಳಿಕ ಪ್ರಾಧಿಕಾರದ ಆಯುಕ್ತ ಮಹೇಶ್ ಅವರು ಅನುಮತಿ ಪತ್ರವನ್ನು ಭಟ್ ಅವರಿಗೆ ಹಸ್ತಾಂತರಿಸಿದರು.
ಉಡುಪಿ ಸಮೀಪದ ಬಡಾನಿಡಿಯೂರಿನಲ್ಲಿ ಪ್ರವಾಸೋದ್ಯಮದ ಉದ್ದೇಶದಿಂದ ರೆಸಾರ್ಟ್ ನಿರ್ಮಿಸಲು ಭಟ್ ಅವರು 2024ರ ಮಾ.20ರಂದು ಅರ್ಜಿ ಸಲ್ಲಿಸಿದ್ದರು. ನಿಯಮಾನುಸಾರ ಮೂರು ತಿಂಗಳೊಳಗೆ ನೀಡಬೇಕಾದ ಅನುಮತಿಯನ್ನು ವಿವಿಧ ಕಾರಣಗಳನ್ನು ಉಲ್ಲೇಖಿಸಿ ಎರಡು ವರ್ಷಗಳವರೆಗೆ ವಿಳಂಬ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.
ಕಳೆದ ಎರಡು ವರ್ಷಗಳಿಂದ ಸತತ ವಿಳಂಬದಿಂದ ಹತಾಶರಾದ ಭಟ್ ಅವರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಏಕಾಂಗಿಯಾಗಿ ಧರಣಿ ಆರಂಭಿಸಿದ್ದರು. ಹಾಲಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಕುಮ್ಮಕ್ಕಿನಿಂದಲೇ ಅನುಮತಿ ನೀಡಲಾಗುತ್ತಿಲ್ಲ ಎಂಬ ಆರೋಪವನ್ನೂ ಅವರು ವ್ಯಕ್ತಪಡಿಸಿದ್ದರು.














