ಪುತ್ತೂರು, ಏ.2: ವಿಶ್ವಕರ್ಮ ಸಮಾಜದ ಹೆಣ್ಣು ಮಗಳಿಗೆ ಮದುವೆಯಾಗುವುದಾಗಿ ನಂಬಿಸಿ ವಂಚನೆ ನಡೆಸಿದ ಆರೋಪ ಎದುರಿಸುತ್ತಿರುವ ಕೃಷ್ಣ ಜೆ. ರಾವ್ ಅವರ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಂಡೆ ವಾದನ, ವಾಸ್ತುಶಾಸ್ತ್ರ ಹಾಗೂ ಚಾಕರಿ ಕೆಲಸಗಳಿಂದ ದೂರವಿರಿಸಬೇಕು ಎಂದು ಸಂತ್ರಸ್ತೆಯ ತಾಯಿ ನಮಿತಾ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಸಮಾಜದ ಹೆಣ್ಣು ಮಗಳಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯಾಗಿಸಿದ ಬಳಿಕ ಅನ್ಯಾಯ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಿಸುವುದಾಗಿ ಒಪ್ಪಿಗೆ ಪತ್ರ ನೀಡಲಾಗಿತ್ತು. ಡಿ.ಎನ್.ಎ ಪರೀಕ್ಷೆಯ ಮೂಲಕ ಆರೋಪ ಸಾಬೀತಾದ ನಂತರವೂ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿಲ್ಲ,” ಎಂದು ಆರೋಪಿಸಿದರು.
ಘಟನೆ ನಡೆದ ಬಳಿಕವೂ ಪಿ.ಜಿ. ಜಗನ್ನಿವಾಸ ರಾವ್ ಮತ್ತು ಅವರ ಪುತ್ರ ದೇವಸ್ಥಾನದಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿರುವುದು ದೇವಾಲಯದ ಶೌಚ್ಯ ಮತ್ತು ಆಗಮ ಶಾಸ್ತ್ರದ ದೃಷ್ಟಿಯಿಂದ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು. “ಇದೇ ಘಟನೆ ಬೇರೆ ಸಮುದಾಯದವರಿಂದ ನಡೆದಿದ್ದರೆ ಆಡಳಿತ ಮಂಡಳಿ ಯಾವ ಕ್ರಮ ಕೈಗೊಳ್ಳುತ್ತಿತ್ತು?” ಎಂದು ಪ್ರಶ್ನಿಸಿದರು.
ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರೂ ಸಮರ್ಪಕ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅವರು ಆರೋಪಿಸಿದರು. “ನಾವು ಕರೆದಿಲ್ಲ, ಅವರು ಸ್ವಯಂ ಬರುತ್ತಿದ್ದಾರೆ” ಎಂದು ಆಡಳಿತ ಮಂಡಳಿ ಹೇಳಿದರೂ, ಕಾರ್ಯಕ್ರಮಗಳಲ್ಲಿ ಅವರನ್ನು ಸೇರಿಸಿಕೊಂಡಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಈ ಕುರಿತು ತಂತ್ರಿ ಕುಂಟಾರು ರವೀಶ್ ಅವರನ್ನು ಸಂಪರ್ಕಿಸಿದಾಗ, “ಗರ್ಭಗುಡಿಯ ಒಳಗಿನ ವಿಧಿವಿಧಾನಗಳು ತಾಂತ್ರಿಕ ವ್ಯಾಪ್ತಿಗೆ ಬರುತ್ತವೆ. ನಿರ್ದಿಷ್ಟ ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸುವ ವಿಚಾರ ನಮ್ಮ ವ್ಯಾಪ್ತಿಗೆ ಸೇರದು” ಎಂಬ ಉತ್ತರ ಸಿಕ್ಕಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಪುತ್ತೂರು ಬಿಜೆಪಿ ನಗರ ಅಧ್ಯಕ್ಷ ಸ್ಥಾನದಿಂದ ಹಾಗೂ ಪುತ್ತೂರು ಶಾರದಾ ಭಜನಾ ಮಂದಿರದ ಅಧ್ಯಕ್ಷ ಸ್ಥಾನದಿಂದ ಪಿ.ಜಿ. ಜಗನ್ನಿವಾಸ ರಾವ್ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದರು.
“ಘಟನೆ ನಡೆದು ಒಂದು ವರ್ಷ ಕಳೆದರೂ ಮಗಳಿಗೆ ನ್ಯಾಯ ಸಿಕ್ಕಿಲ್ಲ. ಮಗುವಿಗೆ ಈಗ ಹತ್ತು ತಿಂಗಳು. ಮದುವೆ ಮಾಡಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದರೂ ಇದೀಗ ಹಿಂದೆ ಸರಿದಿದ್ದಾರೆ,” ಎಂದು ಅವರು ದೂರಿದರು.
ಎಪ್ರಿಲ್ 10ರಂದು ನಡೆಯುವ ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ದೇವಸ್ಥಾನದ ಧ್ವಜಸ್ತಂಭದ ಮುಂದೆ ಕುಳಿತು ಧರಣಿ ನಡೆಸುತ್ತೇನೆ ಎಂದು ಅವರು ಎಚ್ಚರಿಸಿದರು. “ಮೊದಲು ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿ. ನಂತರ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲಿ,” ಎಂದು ನಮಿತಾ ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!