ಪುತ್ತೂರು: ಅಯೋಧ್ಯೆ ಮತ್ತು ಅಂಜನಾದ್ರಿ ಬೆಟ್ಟದಿಂದ ತರಲಾದ ಶ್ರೀರಾಮ–ಹನುಮ ಜ್ಯೋತಿ ಪುತ್ತೂರು ತಾಲೂಕಿನ ವಿವಿಧ ದೇವಸ್ಥಾನ, ದೈವಸ್ಥಾನ, ಭಜನಾಮಂದಿರಗಳು ಹಾಗೂ 60 ಗ್ರಾಮಗಳ ‘ಗ್ರಾಮದರ್ಶನ’ ನೆರವೇರಿಸಿಕೊಂಡು ಈಶ್ವರಮಂಗಲದ ಪಂಚಲಿಂಗೇಶ್ವರ ದೇವಳಕ್ಕೆ ಆಗಮಿಸಿತು. ಜ್ಯೋತಿಗೆ ಭಕ್ತರು ಅದ್ಧೂರಿ ಸ್ವಾಗತ ಕೋರಿದರು.
ಪಂಚಲಿಂಗೇಶ್ವರ ದೇವಳದ ಬಳಿಯಿಂದ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಗೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ದೇವಳದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಅವರು ತೆಂಗಿನಕಾಯಿ ಒಡೆಯುವ ಮೂಲಕ ರಥಯಾತ್ರೆ ಆರಂಭಿಸಿದರು.
ಈಶ್ವರಮಂಗಲದ ಉನ್ನಿಕೃಷ್ಣನ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಹಾಗೂ ಹನುಮಂತನ ವೇಷಧಾರಿಗಳಾದ ಪುಟಾಣಿ ಮಕ್ಕಳು ವಿಶೇಷ ಆಕರ್ಷಣೆಯಾಗಿದ್ದರು. ಚೆಂಡೆ, ವಾದ್ಯ, ಭಜನೆಗಳ ನಡುವೆ ರಥಯಾತ್ರೆ ಹನುಮಗಿರಿ ಕ್ಷೇತ್ರಕ್ಕೆ ತಲುಪಿದಾಗ ಪೂರ್ಣಕುಂಭ ಸ್ವಾಗತದೊಂದಿಗೆ ಕ್ಷೇತ್ರ ಪ್ರವೇಶ ಮಾಡಿಸಲಾಯಿತು.
ರಥಯಾತ್ರೆಯನ್ನು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ಪ್ರಮುಖರು ಸ್ವಾಗತಿಸಿದರು.
ಬಳಿಕ ರಥದಲ್ಲಿದ್ದ ಶ್ರೀರಾಮ–ಹನುಮ ಜ್ಯೋತಿ, ಗಂಗಾಜಲ, ಮೃತ್ತಿಕೆ ಹಾಗೂ ಪವಿತ್ರಜಲ ಇರಿಸಿದ್ದ ಪೀಠವನ್ನು ಆಂಜನೇಯನ ಸನ್ನಿಧಿಗೆ ತರಲಾಯಿತು. ರಾಘವೇಶ್ವರ ಸ್ವಾಮೀಜಿ ಅವರು ಆಂಜನೇಯ ದೇವರ ಎದುರಿನ ದೀಪದಲ್ಲಿ ಶ್ರೀರಾಮ–ಹನುಮ ಜ್ಯೋತಿಯನ್ನು ಪ್ರಜ್ವಲಿಸಿದರು.
ಕ್ಷೇತ್ರದ ಆಡಳಿತ ಧರ್ಮದರ್ಶಿ ಎನ್. ಆಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ, ಹೊರೆಕಾಣಿಕೆ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಗೊಟ್ಟು, ಮಾಜಿ ಶಾಸಕ ಸಂಜೀವ ಮಠಂದೂರು, ನಗರ–ಗ್ರಾಮ ರಚನಾ ಸಮಿತಿ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಕೋಟಿ ಶ್ರೀರಾಮ ತಾರಕ ಮಹಾಯಜ್ಞ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ರಥಯಾತ್ರೆ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!