ನಗರದ ಕುಂಟಿಕಾನ ಸಮೀಪ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಮೃತರು ಎಂದು ಗುರುತಿಸಲಾಗಿದೆ.
ಕಾರ್ಯನಿಮಿತ್ತ ಲಿಫ್ಟ್‌ನಲ್ಲಿ ಮೇಲ್ಮಹಡಿಗೆ ತೆರಳುತ್ತಿದ್ದ ವೇಳೆ ಲಿಫ್ಟ್ ನೆಲಮಹಡಿ ಮತ್ತು ಮೊದಲ ಮಹಡಿ ಮಧ್ಯದಲ್ಲಿ ಕೆಟ್ಟು ನಿಂತಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದ್ದಾರೆ.
ಮೊದಲ ಮಹಡಿಯಲ್ಲಿ ಲಿಫ್ಟ್‌ನ ಅರ್ಧಭಾಗ ಕಾಣಿಸಿಕೊಂಡಿದ್ದರಿಂದ ಬಾಗಿಲನ್ನು ಬಲವಂತವಾಗಿ ತೆರೆಯಲಾಗಿದ್ದು, ನೌಫಾಲ್ ಅವರನ್ನು ಮೇಲಕ್ಕೆ ಎಳೆಯುವ ವೇಳೆ ಏಕಾಏಕಿ ಲಿಫ್ಟ್ ಚಲಿಸಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ನೌಫಾಲ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.














