ಹಾ ಸನ ಜಿಲ್ಲೆಯ (Hassan) ಸಾಪ್ತಾಹಿಕ ಜಾನುವಾರು ಮಾರುಕಟ್ಟೆಯಲ್ಲಿ (Cow Market) ಮಂಗಳವಾರ ರೈತರ (Farmers) ಆಕ್ರೋಶದ ಮುಗಿಲು ಮುಟ್ಟಿದೆ. ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ವಿವಾದ ಅಥವಾ ಕಾನೂನು ಸಂಘರ್ಷಕ್ಕೆ ಆಸ್ಪದ ನೀಡಬಾರದು ಎಂದು ಹಾಸನ ಜಿಲ್ಲೆಯ ಮುಸ್ಲಿಂ ಒಕ್ಕೂಟವು (Muslim Community) ಈ ಬಾರಿ ದನ, ಹಸು ಹಾಗೂ ಎಮ್ಮೆಗಳ ಖರೀದಿಗೆ ಸ್ವಯಂ ನಿರ್ಬಂಧ ಹೇರಿಕೊಂಡಿದೆ.

ಇದರಿಂದಾಗಿ ಸಂತೆಗೆ ತಂದಿದ್ದ ನೂರಾರು ಜಾನುವಾರುಗಳು ಮಾರಾಟವಾಗದೆ ಉಳಿದಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಮಂಗಳವಾರ ನಡೆದ ಸಂತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡರು, ತಮ್ಮ ಸಮುದಾಯದ ಬಾಂಧವರಿಗೆ ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ಖರೀದಿ ಮಾಡದಂತೆ ಬಹಿರಂಗವಾಗಿ ಮನವಿ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಸ್ಲಿಂ ಒಕ್ಕೂಟದ ಪ್ರಮುಖರು, “ಪವಿತ್ರ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಶಾಂತಿ ಭಂಗ ಅಥವಾ ವಿವಾದಗಳು ಸೃಷ್ಟಿಯಾಗಬಾರದು ಎಂಬ ಮುಂಜಾಗ್ರತಾ ಕ್ರಮವಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ.

ಸದ್ಯ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ನಾವು ಕಾನೂನಿನ ಚೌಕಟ್ಟನ್ನು ಗೌರವಿಸುತ್ತೇವೆ ಮತ್ತು ಅದನ್ನು ಮೀರಿ ಯಾವುದೇ ಕೆಲಸ ಮಾಡುವುದಿಲ್ಲ. ಒಂದು ವೇಳೆ ಜಾನುವಾರುಗಳನ್ನು ಖರೀದಿಸಲೇಬೇಕು ಎಂದಾದರೆ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಮೊದಲು ಹಿಂಪಡೆಯಲಿ” ಎಂದು ಆಗ್ರಹಿಸಿದರು.

‘ನಮಗೆ ಹಣ ಕೊಡಿ, ದನಕರುಗಳನ್ನು ನಿಮ್ಮ ಮನೆ ಮುಂದೆ ಕಟ್ಟಿಕೊಳ್ಳಿ’

ಮುಸ್ಲಿಂ ಸಮುದಾಯದ ಈ ದಿಢೀರ್ ನಿರ್ಧಾರದಿಂದಾಗಿ ತಾವೂ ಸಾಕಿ ಮುದ್ದಿಸಿದ ದನಕರುಗಳನ್ನು ಮಾರಾಟ ಮಾಡಲಾಗದೆ ರೈತರು ಕಣ್ಣೀರು ಹಾಕಿದರು. “ನಾವು ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಹಾಲು ಕೊಡುವ ಜರ್ಸಿ ಹಸುಗಳು ವಯಸ್ಸಾದ ಬಳಿಕ ಮತ್ತು ಅವು ಹೋರಿ ಕರುಗಳಿಗೆ ಜನ್ಮ ನೀಡಿದಾಗ ಅವುಗಳನ್ನು ಮೇಯಿಸುವುದು ನಮಗೆ ಭಾರಿ ಆರ್ಥಿಕ ಹೊರೆಯಾಗುತ್ತದೆ.

ಇಂತಹ ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡಿದರೆ ರೈತರಿಗೆ ನಾಲ್ಕು ಕಾಸು ಆದಾಯ ಸಿಗುತ್ತಿತ್ತು. ಈಗ ಹೋರಿ ಕರುಗಳು, ವಯಸ್ಸಾದ ಎತ್ತುಗಳನ್ನು ಇಟ್ಟುಕೊಂಡು ನಾವೇನು ಮಾಡಬೇಕು? ಇತ್ತ ಮೇವೂ ಇಲ್ಲ, ಕೈಯಲ್ಲಿ ಆದಾಯವೂ ಇಲ್ಲ, ಕುಡಿಯಲು ಮಳೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆತುಂಬಾ ದನ ಕರುಗಳನ್ನು ಕಟ್ಟಿಕೊಂಡು ನಾವೆಲ್ಲ ಹೇಗೆ ಬದುಕಬೇಕು?” ಎಂದು ರೈತರು ಆಕ್ರೋಶ ಹೊರಹಾಕಿದರು.

ಬೆಳಗ್ಗಿನಿಂದ ಕಾದರೂ ಕೊಳ್ಳುವವರಿಲ್ಲದೆ ಕಂಗಾಲಾದ ರೈತರು, “ಎಲ್ಲ ಕಡೆಯಿಂದಲೂ ಕೊನೆಗೆ ಪೆಟ್ಟು ಬೀಳುತ್ತಿರುವುದು ಅನ್ನದಾತನಿಗೇ. ನಮ್ಮ ದನಕರುಗಳನ್ನು ಯಾರಾದರೂ ಕೊಂಡುಕೊಳ್ಳಿ. ಜಿಲ್ಲಾಧಿಕಾರಿಯಾದರೂ ಖರೀದಿಸಲಿ, ಸರ್ಕಾರವಾದರೂ ಖರೀದಿಸಲಿ ಅಥವಾ ಸಂಘ ಪರಿವಾರದ ನಕಲಿ ಗೋರಕ್ಷಕರಾದರೂ ಬಂದು ಖರೀದಿಸಲಿ. ನಮಗೆ ಹಣ ಕೊಡಿ, ಜಾನುವಾರುಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಮನೆಗಳ ಮುಂದೆ ಬೇಕಾದರೆ ಕಟ್ಟಿಕೊಳ್ಳಿ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ

ಹಾಸನ ಸಂತೆಯಲ್ಲಿ ನಡೆದಿರುವ ರೈತರ ಈ ಹಸಿ ಹಸಿ ಗೋಳಿನ ವಿಡಿಯೋಗಳು ಮತ್ತು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಕುರಿತು ‘Mr Vicki’ ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ, “ಹಾಸನ ಸಂತೆಯಲ್ಲಿ ರೈತರ ಗೋಳು ಕೇಳುವವರಿಲ್ಲ.  ನಕಲಿ ಗೋವು ರಕ್ಷಕರು ಈಗ ಎಲ್ಲಿ ಹೋಗಿದ್ದಾರೆ? ರೈತರಿಗೆ ದುಡ್ಡು ಕೊಟ್ಟು ಗೋವುಗಳನ್ನು ರಕ್ಷಣೆ ಮಾಡಿ ಪುಣ್ಯ ಕಟ್ಟಿಕೊಳ್ಳಲಿ” ಎಂದು ತೀಕ್ಷ್ಣವಾಗಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ನೀತಿಗಳ ವಿರುದ್ಧ ಸಾರ್ವಜನಿಕರು ಆಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯು ಗ್ರಾಮೀಣ ಭಾಗದ ಹೈನುಗಾರಿಕೆ ನಂಬಿದ ರೈತರ ಬದುಕನ್ನು ಹೇಗೆ ಕಷ್ಟಕ್ಕೆ ತಳ್ಳಿದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!