ಕಬಕ : ಎಸ್‌ವಿಜಿ ಸಮೂಹ ಸಂಸ್ಥೆಗಳ ಅಂಗಸಂಸ್ಥೆಯಾದ ಕಬಕ ಪೋಳ್ಯ ಇನ್‌ಸ್ಪಿರೇಶನ್ ಪದವಿ ಪೂರ್ವ ಕಾಲೇಜಿನಲ್ಲಿ ಆ.22ರಂದು ‘ಪರಂಪರೆ–2026’ ಪ್ರಾರಂಭೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಎಸ್‌ವಿಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಶ್ವನಾಥ ಶೇಷಾಚಲ ಹೇಳಿದರು.ಆ.20ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಎಸ್‌ವಿಜಿ ಸೆಂಟರ್ ಆಫ್ ಎಕ್ಸಲೆನ್ಸ್ ಸಮೂಹ ಸಂಸ್ಥೆಗಳ ವಿವಿಧ ಕಾಲೇಜುಗಳ ಸಿಬ್ಬಂದಿಯ ಕರ್ತವ್ಯ ಹಾಗೂ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪೋಳ್ಯ ಇನ್‌ಸ್ಪಿರೇಶನ್ ಪದವಿ ಪೂರ್ವ ಕಾಲೇಜಿನ ಅಧಿಕೃತ ಪ್ರಾರಂಭೋತ್ಸವವೂ ನಡೆಯಲಿದೆ ಎಂದರು.‘ಇನ್‌ಸ್ಪಿರೇಶನ್’ ಕಾಲೇಜನ್ನು ಸಂಶೋಧನಾ ಕೇಂದ್ರಿತ ಶಿಕ್ಷಣದ ದೃಷ್ಟಿಕೋನದೊಂದಿಗೆ ಆರಂಭಿಸಲಾಗಿದೆ. ದಕ್ಷಿಣ ಕನ್ನಡದ ಹಲವು ಪಿಯು ಕಾಲೇಜುಗಳು ಜೆಇಇ ಮತ್ತು ನೀಟ್ ಪರೀಕ್ಷೆಗಳ ಸಿದ್ಧತೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಆದರೆ ವಿದ್ಯಾರ್ಥಿಗಳನ್ನು ಸಂಶೋಧನೆ ಹಾಗೂ ಹೊಸ ಚಿಂತನೆಯತ್ತ ಕೊಂಡೊಯ್ಯುವುದು ಇನ್‌ಸ್ಪಿರೇಶನ್‌ನ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.ಎಸ್‌ವಿಜಿ ಸೆಂಟರ್ ಆಫ್ ಎಕ್ಸಲೆನ್ಸ್ ಸಮೂಹ ಸಂಸ್ಥೆಗಳಡಿ ಮೈಸೂರು, ಎಚ್.ಡಿ.ಕೋಟೆ, ಸಕಲೇಶಪುರ, ಬೆಂಗಳೂರು ಸೇರಿದಂತೆ ವಿವಿಧೆಡೆ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 3 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೊಸ ಪೀಳಿಗೆಗೆ ಅಗತ್ಯವಾದ ಜ್ಞಾನ, ಕೌಶಲ ಮತ್ತು ಸಂಶೋಧನಾ ಮನೋಭಾವ ಬೆಳೆಸುವ ಉದ್ದೇಶದಿಂದ ಪೋಳ್ಯದಲ್ಲಿ ವಿಶೇಷತೆಯೊಂದಿಗೆ ಕಾಲೇಜು ಆರಂಭಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಭೋಜೇಗೌಡ, ಮೋಹನ್ ಆಳ್ವ, ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಜಿಲ್ಲೆಗಳಿಂದ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಕಾಲೇಜಿನ ಹೊಸ ಪ್ರಯತ್ನಕ್ಕೆ ಸಾರ್ವಜನಿಕರು ಹಾಗೂ ಪೋಷಕರ ಸಹಕಾರ ಅಗತ್ಯ ಎಂದು ವಿಶ್ವನಾಥ ಶೇಷಾಚಲ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪೋಳ್ಯ ಇನ್‌ಸ್ಪಿರೇಶನ್ ಪದವಿ ಪೂರ್ವ ಕಾಲೇಜಿನ ಸಂಯೋಜಕ ಗುರುರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!