ಶಿವಮೊಗ್ಗ :”ಸಿದ್ದರಾಮಯ್ಯ ಪತ್ನಿ ಮುಗ್ದ, ಸಾತ್ವಿಕ ಹೆಣ್ಣು ಮಗಳು.ಆ ತಾಯಿಗೆ ಅನ್ಯಾಯ ಆಗಬಾರದು ಎಂದು ನಾನು ಭಗವಂತನಿಗೆ ಪ್ರಾರ್ಥನೆ ಮಾಡುತ್ತೇನೆ” ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬುಧವಾರ (ಸೆ25)ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ”ಸಿದ್ದರಾಮಯ್ಯ ಬಗ್ಗೆ ಹೈ ಕೋರ್ಟ್ ನಲ್ಲಿ ತೀರ್ಪು ಬಂದಿದೆ.
ಇದು ಮಹತ್ವ ಪಡೆದುಕೊಂಡಿದ್ದು, ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿ ನಾನು ಏನೂ ಹೇಳುವುದಿಲ್ಲ. ತೀರ್ಪು ಬರುವ ಮುನ್ನ ನ್ಯಾಯ ಸಿಗುತ್ತದೆ ಎಂದು ಅವರು ಹೇಳುತ್ತಿದ್ದರು. ತೀರ್ಪು ಬಂದ ನಂತರ ತೀರ್ಪಿನ ಬಗ್ಗೆ ಮನ್ನಣೆ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಬದ್ಧರಾಗುತ್ತಾರೋ ಇಲ್ಲವೋ” ಎಂದು ಪ್ರಶ್ನಿಸಿದರು.
ಸಹಿ ಮಾಡು ಅಂದರೆ ಮನೆಯವರು ಸಹಿ ಮಾಡುತ್ತಾರೆ. ಸಿದ್ದರಾಮಯ್ಯ ಪತ್ನಿ ಮುಗ್ದ, ಸಾತ್ವಿಕ ಹೆಣ್ಣು ಮಗಳು. ಆ ತಾಯಿಗೆ ಅನ್ಯಾಯ ಆಗಬಾರದು. ಭಗವಂತನ ಧಯೆಯಿಂದ ಸಿದ್ದರಾಮಯ್ಯ ಅವರ ಪರವಾಗಿ ನ್ಯಾಯ ಸಿಗಲಿ” ಎಂದು ಈಶ್ವರಪ್ಪ ಅನುಕಂಪದ ಮಾತಾಡಿದರು.
ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದಿಲ್ಲ ಅನ್ನುತ್ತಿದ್ದಾರೆ.ಹಾಗಾದರೆ ಕೋರ್ಟ್ ಮುಚ್ಚಿಬಿಡಿ, ಯಾಕೆ ಬೇಕು ಕೋರ್ಟ್?ಕಾಂಗ್ರೆಸ್ ಪಕ್ಷ ಸರಿಯಾಗಿ ತೀರ್ಮಾನ ತೆಗೆದುಕೊಳ್ಳಬೇಕು. ನಿಮ್ಮ ಪರ ವಾಗಿ ಬಂದರೆ ನ್ಯಾಯ, ನಿಮ್ಮ ವಿರುದ್ಧ ತೀರ್ಪು ಬಂದರೆ ಅನ್ಯಾಯವೇ” ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನವರೇ ನೀವು ಸುಪ್ರೀಂ ಕೋರ್ಟ್ ಗೆ ಹೋಗಿ, ನ್ಯಾಯಾಂಗ ವ್ಯವಸ್ಥೆ ಗೆ ತಲೆಬಾಗಿ. ನಿಮಗೆ ನ್ಯಾಯ ಸಿಗಲಿ ಅನ್ನುವುದು ನನ್ನ ಬಯಕೆ”ಎಂದರು.
ರಾಜೀನಾಮೆ ಗೆ ಕೊಡುವುದಿಲ್ಲ ಅನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ. ನಾನು ಮಾತಾನಾಡಲು ನೈತಿಕ ಹಕ್ಕಿದೆ. ಯಡಿಯೂರಪ್ಪ ಮೇಲೆ ಆರೋಪ ಬಂದಮೇಲೆ ತತ್ ಕ್ಷಣ ರಾಜೀನಾಮೆ ಕೊಟ್ಟಿದ್ದರು. ನನ್ನ ಮೇಲೆ ಬಂದ ಆರೋಪದಿಂದ ನಾನು ಕೂಡಲೇ ರಾಜೀನಾಮೆ ನೀಡಿದೆ” ಎಂದರು.
ಸಿದ್ದರಾಮಯ್ಯ ಪ್ರಕರಣವನ್ನ ಇಡೀ ಪ್ರಪಂಚ ನೋಡುತ್ತದೆ. ಹೈಕೋರ್ಟ್ ತೀರ್ಪು ಒಪ್ಪುವುದಿಲ್ಲ ಅನ್ನೋದು ಯಾವ ನ್ಯಾಯ? ಕೋರ್ಟಿನ ತೀರ್ಪು ಯಾರಿದಂಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ನ್ಯಾಯಾಂಗ ವ್ಯವಸ್ಥೆಗೆ ತಲೆ ಬಾಗಿ. ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆ ಅದನ್ನು ಮಾಡಿ” ಎಂದರು.