ನವದೆಹಲಿ: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಸುವ ಪ್ರಸ್ತಾವದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ ಏನನ್ನೂ ಮಾಡದಂತೆ ಸೋಮವಾರ ಎಚ್ಚರಿಸಿದೆ.

ಸುಪ್ರೀಂ ಕೋರ್ಟ್‌ ಎಚ್ಚರಿಕೆ ಬಂದ ಕೆಲ ಗಂಟೆಗಳಲ್ಲಿಯೇ, ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ಜಿಲ್ಲೆಯ ಉಪ ನಿರ್ದೇಶಕರು ತಾವು ಹಿಂದೆ ಹೊರಡಿಸಿದ್ದ ಕೆಲ ಜ್ಞಾಪನಾ ಪತ್ರಗಳನ್ನು ಹಿಂಪಡೆದಿದ್ದಾರೆ.

8, 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಉಪ ನಿರ್ದೇಶಕರು ಸೆಪ್ಟೆಂಬರ್‌ 4 ಮತ್ತು 15ರಂದು ಜ್ಞಾಪನಾ ಪತ್ರಗಳನ್ನು ಹೊರಡಿಸಿದ್ದರು.

‘ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ಯಾವುದನ್ನೂ ಮಾಡಬಾರದು. ಹೀಗಾದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್‌ ಚಂದ್ರ ಶರ್ಮಾ ಅವರ ಪೀಠ ಎಚ್ಚರಿಕೆ ನೀಡಿತು.

ಈ ರೀತಿಯ ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಪ್ರಸ್ತಾವವು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ’ ಎಂದು ವಕೀಲ ಕೆ.ವಿ.ಧನಂಜಯ ಅವರು ಪ್ರತಿಪಾದಿಸಿದರು.

5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆಗಳನ್ನು ನಡೆಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಈಗಾಗಲೇ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.

ಈ ಸಂಬಂಧ ನ್ಯಾಯಾಂಗ ನಿಂಧನೆ ಅರ್ಜಿ ಸಲ್ಲಿಸಲು ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳು ಮತ್ತು ರೆಗ್‌ (ನಮ್ಮ ಶಾಲೆಗಳು) ಸಂಸ್ಥೆಗೆ ಪೀಠ ಅವಕಾಶ ಮಾಡಿಕೊಟ್ಟಿತು. ಈ ವಿಷಯವನ್ನು ಮುಂದಿನ ವಾರ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಪೀಠ ಹೇಳಿದೆ.

5, 8 ಮತ್ತು 9ನೇ ತರಗತಿಗಳಿಗೆ ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆ ನಡೆಸಲು ಅನುಮತಿಸಿ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ 2024ರ ಮಾರ್ಚ್‌ನಲ್ಲಿ ರದ್ದುಪಡಿಸಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!