



ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಸ್ವಾಯತ್ತತೆ ಪಡೆಯುವ ನಿಟ್ಟಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಕ್ರಿಯೆ ಪ್ರಾರಂಭಿಸಿದ್ದು, ಯುಜಿಸಿಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ವಿವಿಧ ಅಧಿಕಾರಿಗಳನ್ನೊಳಗೊಂಡ ಸ್ಥಾಯಿ ಸಮಿತಿ ಕಾಲೇಜಿಗೆ ಬೇಟಿ ನೀಡಿ ಪರಿಶೋದಿಸಿ ಸ್ಥಾನಮಾನ ನೀಡಬಹುದೆಂಬ ಶಿಫಾರಸ್ಸು ಮಾಡಿತ್ತು. ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅಂಗೀಕರಿಸಿ, ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿದ್ದು, ಸರ್ಕಾರದ ಅನುಮತಿಯಂತೆ ಮಂಗಳೂರು ವಿಶ್ವವಿದ್ಯಾಲಯ ೨೦೨೪-೨೫ನೇ ಶೈಕ್ಷಣಿಕ ವರ್ಷದಿಂದಲೇ ಸ್ವಾಯತ್ತ ಸ್ಥಾನ ಮಾನ ದೊರೆತಿದೆ ಎಂದು ಕಾಲೇಜಿನ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಹೇಳಿದರು.
ಆಂಟೊನಿ ಪತ್ರಾವೋರವರಿಂದ ಸ್ಥಾಪಿತಗೊಂಡ ಸಂತ ಫಿಲೋಮಿನಾ ಕಾಲೇಜು ಕಳೆದ ೬೬ ವರ್ಷಗಳಿಂದ ಗ್ರಾಮೀಣ ಪ್ರದೇಶದ ಉನ್ನತ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಶ್ರೇಣೀಕರಣ ಸಂಸ್ಥೆ(ನ್ಯಾಕ್)ನಿಂದ ಸತತವಾಗಿ ಮೂರು ಬಾರಿ ಎ ಗ್ರೇಡ್ ಮಾನ್ಯತೆ ದೊರೆತಿದೆ. ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯು ಐಎಸ್‌ಒ ೯೦೦೧:೨೦೧೫ ಪ್ರಮಾಣೀಕರಣವನ್ನು ಸಹ ಪಡೆದುಕೊಂಡಿದೆ. ಕಾಲೇಜಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (ಎಐಸಿಟಿಇ) ಅನುಮೋದನೆ ದೊರಕಿದ್ದು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಬಿಬಿಎ ಮತ್ತು ಬಿಸಿಎ ಕೋರ್ಸ್‌ಗಳು ಎಐಸಿಟಿಇ ಸಂಯೋಜಿತ ಪದವಿ ಕೋರ್ಸ್‌ಗಳಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಾಯತ್ತತೆಗಾಗಿ ಕಾಲೇಜಿನಲ್ಲಿ ಸಕಲ ಸಿದ್ಧತೆಗಳನ್ನೂ ನಡೆಸಲಾಗಿದ್ದು, ಸುಸಜ್ಜಿತ ಕಂಟ್ರೋಲ್ ರೂಮ್, ಬೋರ್ಡ್ ರೂಮ್ ಹಾಗೂ ಇನ್ನಿತರ ಭೌತಿಕ ಸೌಲಭ್ಯಗಳು, ಪರೀಕ್ಷಾಂಗ ಮುಂತಾದ ವಿಭಾಗಗಳು ಶೀಘ್ರದಲ್ಲಿಯೇ ಕಾರ್ಯ ನಿರ್ವಹಿಸಲಿದೆ. ಶಿಕ್ಷಣ ಮಂಡಳಿ, ಪ್ರತಿ ವಿಭಾಗದ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಗಳು ಕಾರ್ಯ ನಿರ್ವಹಿಸಲಿವೆ. ಕಾಲೇಜಿನಲ್ಲಿ ಪದವಿ ವಿಭಾಗದಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಹಾಗೂ ಬಿಸಿಎ (ಎಐ & ಎಂಎಲ್) ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಸ್ನಾತಕೋತ್ತರ ವಿಭಾಗದಲ್ಲಿ ಎಂಎಸ್ ಡಬ್ಲ್ಯೂ, ಎಂಕಾಂ, ಹಾಗೂ ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಕೋರ್ಸ್ ಗಳನ್ನು ನೀಡಲಾಗುತ್ತಿದ್ದು, ಈ ಶೈಕ್ಷಣೆಕ ವರ್ಷದಿಂದ ಎಂಸಿಎ ಕೋರ್ಸ್‌ಅನ್ನು ಪ್ರಾರಂಭಿಸಲಾಗುವುದು. ಕಾಲೇಜಿನಲ್ಲಿ ಐಸಿಟಿ ಅಕಾಡೆಮಿಯೊಂದಿಗೆ ಒಡಂಬಡಿಕೆಯ ಸಹಾಯದಿಂದ ಸೈಬರ್ ಸೆಕ್ಯುರಿಟಿ ಮುಂತಾದ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ ಎಂದರು.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ಸಂತ ಫಿಲೋಮಿನಾ ಸಂಸ್ಥೆಯನ್ನು ಎನ್ ಎ ಐ ಎನ್ ಅತಿಥೇಯ ಸಂಸ್ಥೆಯಾಗಿ ಆಯ್ಕೆ ಮಾಡಿದೆ. ಕರ್ನಾಟಕ ಸ್ಟಾರ್ಟ್‌ಅಪ್ ನೀತಿಯ ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್ ೨.೦ ಕ್ರಿಯಾಶೀಲ ಯುವಕಯುವತಿಯರಿಗೆ ನಾವೀನ್ಯತೆ ಮತ್ತು ಉದ್ಯಮಶೀಲತೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಪ್ರಾಚಾರ್ಯ ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ ಸ್ವಾಯತ್ತತೆಯನ್ನು ಪಡೆಯಲು ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ನೀಡುವ ಜತೆಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ. ಸ್ಥಾನಮಾನ ಪಡೆದ ಬಳಿಕ ಮಕ್ಕಳ ಅಗತ್ಯಗಳನ್ನು ಗಮನಿಸಿಕೊಂಡು ಹೊಸ ಶೈಕ್ಷಣಿಕ ವ್ಯವಸ್ಥೆಯನ್ನು ಕಲ್ಪಿಸಬಹುದಾಗಿದೆ. ಪರೀಕ್ಷೆ ಹಾಗೂ ಫಲಿತಾಂಶದಲ್ಲೂ ಬಹಳಷ್ಟು ಸಮಯವನ್ನು ಉಳಿಸಬಹುದಾಗಿದೆ. ಹೊಸ ನೀತಿಗಳ ಬಳಿಕ ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾಯತ್ತತೆಯನ್ನು ಪಡೆದ ಮೊದಲ ಸಂಸ್ಥೆಯಾಗಿದೆ. ಮುಂದಿನ ದಿನದಲ್ಲಿ ಪುತ್ತೂರಿನ ಅವಶ್ಯಕತೆಗಳನ್ನು ಗಮನಿಸಿಕೊಂಡು ಹೊಸ ಕೋರ್ಸ್ ಗಳನ್ನು ಪ್ರಾರಂಭಿಸುವ ಚಿಂತನೆಗಳಿದೆ ಎಂದರು.
ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಉಪಸ್ಥಿತರಿದ್ದರು.


