ಪುತ್ತೂರು; ಪುತ್ತೂರು ಶಾರದಾ ಭಜನಾ ಮಂದಿರದ ೯೦ನೇ ವರ್ಷದ ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಆಯೋಜನೆ ಮಾಡಲಾಗುತ್ತಿರುವ ಅದ್ದೂರಿ ಶೋಭಾಯಾತ್ರೆ ಅ.೧೨ರಂದು ಸಂಜೆ ೫ ಗಂಟೆಗೆ ನಡೆಯಲಿದೆ. ಈ ಶೋಭಾಯಾತ್ರೆಯಲ್ಲಿ ಕರ್ನಾಟಕ-ಕೇರಳದ ಕಲಾತಂಡಗಳ ಪ್ರದರ್ಶನ ನಡೆಯಲಿದೆ. ಮಂಗಳವಾರ ಮುಂಜಾನೆ ಶಾರದಾ ಪ್ರತಿಷ್ಟಾಕಾರ್ಯಕ್ರಮ ನಡೆಸಲಾಯಿತು ಎಂದು ಸಮಿತಿ ಗೌರವಾಧ್ಯಕ್ಷ ಕೆದಂಬಾಡಿಗುತ್ತು.ಸೀತಾರಾಮ ರೈ ತಿಳಿಸಿದರು.
ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಕೇರಳದ ೬ ಕಲಾತಂಡಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. ಇದರ ಜತೆಗೆ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಕಡೆಗಳ ಕಲಾತಂಡಗಳು ಶೋಭಾಯಾತ್ರೆ ಸೌಂದರ್ಯವನ್ನು ಹೆಚ್ಚಿಸಲಿವೆ. ನವರಾತ್ರಿಯ ಈ ಶೋಭಾ ಯಾತ್ರೆ ಹತ್ತೂರಿನ ಮಂದಿ ವೀಕ್ಷಣೆ ನಡೆಸುವಂತಾಗಬೇಕು ಎಂಬ ಕಾರಣದಿಂದ ಅದ್ದೂರಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಲಾತಂಡಗಳ `ಕಥಕ್ಕಳಿ’
ಕೇರಳದ ಪಂದಳಾಟಮ್, ಸಿಂಗಾರಿ ಕಾವಡಿ, ಕಥಕ್ಕಳಿ, ಮಹಿಳಾ ಸಿಂಗಾರಿ ಮೇಳಮ್, ತಿರಾಯಾಟ್ಟಮ್, ಸಿಂಗಾರಿ ಮೇಳ ಕಲಾತಂಡಗಳು ಹಾಗೂ ಕರ್ನಾಟಕದ ವೇದಘೋಷ, ಚೆಂಡೆ ಮೇಳ, ವಾದ್ಯಘೋಷ, ವಾದ್ಯವೃಂದ, ಕುಣಿತ ಭಜನೆಗಳೊಂದಿಗೆ ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ವೀರಭದ್ರ ಕುಣಿತ, ಕಹಳೆ, ಉತ್ತರಕರ್ನಾಟಕದ ಜುಗ್ಗಳಿಗೆ ಮೇಳ ಕಲಾ ತಂಡಗಳು ಭಾಗಿಯಾಗಲಿವೆ. ವಿಶೇಷ ಆಕರ್ಷಣೆಯಾಗಿ ನಡೆದಾಡುವ ಬೃಹತ್ ಹನುಮಂತ ಹಾಗೂ ಬೃಹತ್ ಘಟೋದ್ಗಜ ಭಾಗಿಯಾಗುವ ಮೂಲಕ ಶೋಭಾಯಾತ್ರೆಗೆ ಮೆರುಗು ನೀಡಲಿದ್ದಾರೆ.
ಶೊಭಾಯಾತ್ರೆ ಬೊಳುವಾರಿನಲ್ಲಿ ಸಂಜೆ ೫ ಗಂಟೆಗೆ ಆರಂಭವಾಗಲಿದೆ. ಅಲ್ಲಿಂದ ದರ್ಭೆ ವೃತ್ತದ ತನಕ ಶೋಭಾಯಾತ್ರೆ ನಡೆಯಲಿದೆ. ಭಕ್ತರು ಮತ್ತು ಕಲಾಭಿಮಾನಿಗಳಿಗೆ ೧೨ ಕಡೆಗಳಲ್ಲಿ ನಿಂತು ನೋಡುವ ವ್ಯವಸ್ಥೆ ಮಾಡಲಾಗಿದೆ. ಪುತ್ತೂರಿನ ಮುಖ್ಯರಸ್ತೆಯ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಆದರೆ ಪಟಾಕಿ ಮತ್ತು ಡಿಜೆಗೆ ಶೋಭಾಯಾತ್ರೆಯಲ್ಲಿ ಅವಕಾಶ ಇಲ್ಲ ಎಂದು ಅವರು ತಿಳಿಸಿದರು.
ಶೋಭಾಯಾತ್ರೆಯಲ್ಲಿ ಹಣ್ಣುಕಾಯಿ ಮತ್ತು ಮಂಗಳಾರತಿ ವ್ಯವಸ್ಥೆ ಇದ್ದು, ಭಕ್ತಾಧಿಗಳು ಶೋಭಾಯತ್ರೆಯ ಉದ್ದಕ್ಕೂ ಈ ಸೇವೆಗಳನ್ನು ಮಾಡಬಹುದು. ವರ್ತಕರು ತಮ್ಮ ಅಂಗಡಿ ಮುಂಭಾಗದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಆದರೆ ಈ ಸಂದರ್ಭ ರಸ್ತೆಗೆ ನೀರು ಚೆಲ್ಲಬೇಡಿ. ಕುಣಿತ ಭಜನೆಯಲ್ಲಿ ಭಾಗವಹಿಸುವವರು ಬರಿಗಾಲಲ್ಲಿರುತ್ತಾರೆ ಎಂದು ಶೋಭಾಯಾತ್ರೆಯ ಸಂಚಾಲಕ ನವೀನ್ ಕುಲಾಲ್ ವಿನಂತಿಸಿದರು.
ಗೋಷ್ಟಿಯಲ್ಲಿ ಸಮಿತಿ ಉಪಾಧ್ಯಕ್ಷ ಯಶವಂತ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಹಾಗೂ ಜತೆ ಕಾರ್ಯದರ್ಶಿ ಸುಧೀರ್ ಕಲ್ಲಾರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!