ಬೆಂಗಳೂರು : ರಾಜ್ಯ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡಿದ್ದ ಮುಡಾ ಕೇಸ್ನಲ್ಲಿ (MUDA Case) ಲೋಕಾಯುಕ್ತ (Karnataka Lokayukta) ತನಿಖೆ ಮುಂದುವರಿಸಿದೆ. ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಬಿಜೆಪಿ ಬೀಗಿಪಟ್ಟು ಹಿಡಿದಿದೆ.
ಆದರೆ ಸಿಎಂ ಮಾತ್ರ ನಾನ್ಯಾಕೆ ರಾಜೀನಾಮೆ ನೀಡ್ಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಇದರ ನಡುವೆಯೇ ಮಹತ್ವದ ಬೆಳವಣಿಗೆ ನಡೆದಿದೆ. ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ಇಂದು ರಾಜೀನಾಮೆ (Resigns) ಸಲ್ಲಿಕೆ ಮಾಡಿದ್ದಾರೆ.
ಸಿಎಂ ಸೂಚನೆಯಂತೆ ರಾಜೀನಾಮೆ
ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮರಿಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಅವರು ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ರು, ಅದಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಆರೋಗ್ಯವು ಸರಿಯಿಲ್ಲ, ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ಮುಡಾ ತನಿಖೆ ನಡೆಯುತ್ತಿದೆ, ತನಿಖೆ ನಡೆಯಲಿ. ಅಕ್ರಮ ಆಗಿದೆಯಾ ಇಲ್ಲ ಅಂತ ನಾನು ಹೇಳೊಲ್ಲ. ಈಗ ತನಿಖೆ ನಡೆಯುತ್ತಿದೆ, ತನಿಖೆಯಿಂದ ಸತ್ಯ ಹೊರಬರುತ್ತೆ ಎಂದು ಹೇಳಿದರು.
ಎರಡು ಬಾರಿ ಸ್ಟ್ರೋಕ್ ಆಗಿತ್ತು
ರಾಜೀನಾಮೆಗೆ ಒತ್ತಡ ಇತ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಮರಿಗೌಡ ಅವರು, ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ. ಸೈಟ್ ವಿಚಾರವಾಗಿ ಸಿಎಂ ಅವರು ಯಾವುದೇ ಒತ್ತಡ ನನ್ನ ಮೇಲೆ ಹಾಕಿಲ್ಲ. ಸಿದ್ದರಾಮಯ್ಯ ನಮ್ಮ ನಾಯಕರು, 40 ವರ್ಷಗಳಿಂದ ಜೊತೆಯಲ್ಲಿ ಇದ್ದೇನೆ. ತಾಲೂಕು, ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ನನ್ನನ್ನು ಮಾಡಿದ್ದರು. ಯಾವತ್ತು ಕೂಡಾ ಸಿದ್ದರಾಮಯ್ಯ ಅವರು ಅಕ್ರಮ ಮಾಡಿ ಅಂತ ಹೇಳಿಲ್ಲ. ಮುಡಾ ವಿಚಾರದಲ್ಲೂ ಸಿಎಂ ಒತ್ತಡ ಹಾಕಿಲ್ಲ. ಎರಡು ಬಾರಿ ಸ್ಟ್ರೋಕ್ ಆಯ್ತು, ಆರೋಗ್ಯ ಸರಿಯಿಲ್ಲ. ಹೀಗಾಗಿ ಮುಡಾ ಅಧ್ಯಕ್ಷರಾಗಿ ಮುಂದುವರೆಯಲು ಆಗುವುದಿಲ್ಲ ಅಂತ ರಾಜೀನಾಮೆ ಕೊಟ್ಟಿದ್ದೇನೆ. ಆದರೆ ಇಲಾಖೆ ಸಚಿವರು ರಾಜೀನಾಮೆಗೆ ಒತ್ತಡ ಮಾಡಿದರೂ ಎಂಬ ಸುದ್ದಿ ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದ್ದಾರೆ.