
ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪತಿ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣವನ್ನು ನಂಜನಗೂಡು ಗ್ರಾಮಾಂತರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಿಜೆಪಿ ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಹಾಗೂ ಹಾಲಿ ದೇವರಸನಹಳ್ಳಿ ಗ್ರಾಪಂ ಸದಸ್ಯ ಗೋವರ್ಧನ್ (36), ನಗರದ ನೀಲಕಂಠ ನಗರ ನಿವಾಸಿ ಜಾಹಿರ್ (25), ಹಳ್ಳದಕೇರಿ ನಿವಾಸಿ ಮಣಿಕಂಠ (24), ಕೆಎಚ್‌ಬಿ ಕಾಲೋನಿ ನಿವಾಸಿ ಮಹೇಂದ್ರ (25) ಬಂಧಿತರು.
ಅಧಿಕಾರವನ್ನು ಮುಂದುವರಿಸಲು ಅಧ್ಯಕ್ಷ ಸ್ಥಾನದಲ್ಲಿ ಉಳಿಯಲು ಉಪಾಧ್ಯಕ್ಷೆಯ ಪತಿಯನ್ನು ಹತ್ಯೆ ಮಾಡಲಾಗಿದೆ.
ತಾಲೂಕಿನ ದೇವರಸನಹಳ್ಳಿ ಗ್ರಾಪಂ ಸದಸ್ಯೆ ಸೌಭಾಗ್ಯ ಅವರ ಪತಿ ಕೆಬ್ಬೇಪುರ ಗ್ರಾಮದ ನಂಜುಂಡಸ್ವಾಮಿ(47) ತಾಲೂಕಿನ ಹೊಸೂರು ಸಮೀಪ ಅ.6ರ ಭಾನುವಾರ ರಾತ್ರಿ ಗಾಯಗೊಂಡ ಸ್ಥಿತಿಯಲ್ಲಿ ಗದ್ದೆಯ ಬದುವಿನಲ್ಲಿ ಬಿದ್ದಿದ್ದರು. ಮರು ದಿನ ಬೆಳಗ್ಗೆ ವಿಷಯ ತಿಳಿದ ಗ್ರಾಮಸ್ಥರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಂಜುಂಡಸ್ವಾಮಿ ಮೃತಪಟ್ಟಿದ್ದರು.
ಈ ಸಂಬಂಧ ಗ್ರಾಪಂ ಉಪಾಧ್ಯಕ್ಷೆ ಸೌಭಾಗ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನನ್ನ ಪತಿಯನ್ನು ರಾಜಕೀಯ ಪ್ರೇರಿತ ಉದ್ದೇಶದಿಂದ ಕೊಲೆ ಮಾಡಿದ್ದು ತನಿಖೆ ನಡೆಸುವಂತೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದ ತಂಡ ತನಿಖೆ ತನಿಖೆಯನ್ನು ಆರಂಭಿಸಿತು. ಮೊದಲಿಗೆ ನಂಜುಡಸ್ವಾಮಿಯ ಒಳ ಮತ್ತು ಹೂರ ಹೋಗುವ ಕೆರೆಗಳು ಹಾಗೂ ಕೊನೆಯ ಕರೆಯ ಅಧಾರದ ಮೇಲೆ ತನಿಖೆ ಚುರುಕುಗೊಳಿಸಿದ ಪೊಲೀಸ್ ತಂಡ ಅಪರಾಧಿಗಳ ಸೆರೆಗೆ ಬಲೆ ಬೀಸಿತು.
ಕಳೆದ 20 ತಿಂಗಳ ಹಿಂದೆ ತನ್ನ ಹತ್ತಿರದ ಸಂಬಂಧಿ ಸುಮತಿ ಅವರನ್ನು ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷೆಯನ್ನಾಗಿ ಮಾಡಿದ್ದ ಗೋವರ್ಧನ್, ಸದಸ್ಯರ ಒಪ್ಪಂದದ ಮಾತುಕತೆಯಂತೆ 20 ತಿಂಗಳ ನಂತರ ಹಾಲಿ ಸದಸ್ಯೆ ಸೌಭಾಗ್ಯ ಅವರಿಗೆ ಅಧಿಕಾರ ಬಿಟ್ಟು ಕೊಡಬೇಕಿತ್ತು. ಆದ್ದರಿಂದ ನಂಜುಂಡಸ್ವಾಮಿ ನಮಗೆ ಮಾತುಕತೆಯಂತೆ ಅಧಿಕಾರ ಬಿಟ್ಟು ಕೊಡುವಂತೆ, ಗೋವರ್ಧನ್ ಬಳಿ ಕೇಳಿಕೊಂಡಿದ್ದ. ಅಧಿಕಾರ ಸುಮತಿ ಅವರಲ್ಲೇ ಉಳಿಯುವಂತೆ ಮಾಡಲು ಅ.6 ರಂದು ಗ್ರಾಪಂ ಇತರ ಸದಸ್ಯರನ್ನು ಒಪ್ಪಿಸುವ ಸಲುವಾಗಿ ಗೋವರ್ಧನ್ ನೇತೃತ್ವದಲ್ಲಿ ಮೃತ ನಂಜುಂಡಸ್ವಾಮಿ ಎಲ್ಲರನ್ನೂ ಕರೆದುಕೊಂಡು ನಗರದ ಖಾಸಗಿ ಡಾಬಾ ಒಂದರಲ್ಲಿ ರಾತ್ರಿ ಎಲ್ಲರೂ ಪಾರ್ಟಿ ಮಾಡಿದ್ದರು.
ನಂತರದಲ್ಲಿ ಮನೆಗೆ ಹಿಂದಿರುಗುವಾಗ ಹೊಸೂರು ಗೇಟ್ ಬಳಿ ನಾಲ್ವರು ಆರೋಪಿಗಳು ಮೃತ ನಂಜುಂಡಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ತನಿಖೆ ಮುಂದುವರಿಸಿದಾಗ ಗೋವರ್ಧನ್ ಅವರ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಅದರಂತೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಸಂಬಂಧ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
