
ಕಾಸರಗೋಡು: ಕೇಂದ್ರ-ರಾಜ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಡಿವೈಎಫ್‌ಐ ನೇತಾರೆ, ಶಿಕ್ಷಕಿ, ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27)ಯನ್ನು ಪೊಲೀಸರು ಗುರುವಾರ ಸಂಜೆ ವಿದ್ಯಾನಗರದಲ್ಲಿ ಬಂಧಿಸಿದ್ದಾರೆ.
ವಿದ್ಯಾನಗರದಲ್ಲಿ ನ್ಯಾಯವಾದಿಯೋರ್ವರನ್ನು ಭೇಟಿಯಾಗಿ ನ್ಯಾಯಾಲಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ದಾರಿ ಮಧ್ಯೆ ಪ್ರಕರಣದ ತನಿಖೆ ನಡೆಸಲು ನೇಮಿಸಿದ್ದ ಮಹಿಳಾ ಪೊಲೀಸರು ವಿದ್ಯಾನಗರ ಪೊಲೀಸರ ನೆರವಿನೊಂದಿಗೆ ಆಕೆಯನ್ನು ಬಂಧಿಸಿದರು. ಆ ಬಳಿಕ ಸಚಿತಾಳನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಸಮಗ್ರ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ಸೂಚನೆ ನೀಡಿದ್ದಾರೆ.
ವಾರದಿಂದ ಸಚಿತಾ ರೈ ತಲೆಮರೆಸಿಕೊಂಡಿದ್ದಳು. ಈಕೆಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸುಗಳ ದಾಖಲಾಗಿವೆ.
ಸಿಪಿಸಿಆರ್‌ಐ, ಕೇಂದ್ರೀಯ ವಿದ್ಯಾಲಯ, ಎಸ್.ಬಿ.ಐ, ಕರ್ನಾಟಕದ ಅಬಕಾರಿ, ಅರಣ್ಯ ಇಲಾಖೆ ಮೊದಲಾದೆಡೆ ಉದ್ಯೋಗ ಭರವಸೆ ನೀಡಿ ಹಣ ಪಡೆದು ವಂಚಿಸಲಾಗಿತ್ತೆಂದು ದೂರು ನೀಡಲಾಗಿತ್ತು. ಉಡುಪಿ ಕೇಂದ್ರೀಕರಿಸಿ ರಿಕ್ರೂಟಿಂಗ್ ಸಂಸ್ಥೆ ನಡೆಸುತ್ತಿರುವ ವ್ಯಕ್ತಿ ಮೂಲಕ ಸಚಿತಾ ವಂಚಿಸಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಇನ್ನೆರಡು ಕೇಸು ದಾಖಲು
ಕಾಸರಗೋಡು: ಸಚಿತಾ ರೈ ವಿರುದ್ಧ ಬದಿಯಡ್ಕ ಪೊಲೀಸರು ಇನ್ನೆರಡು ಕೇಸುಗಳನ್ನು ದಾಖಲಿಸಿದ್ದಾರೆ. ನೆಕ್ರಾಜೆ ಮಾವಿನಕಟ್ಟೆ ನಿವಾಸಿ ರಹಿಯಾನತ್ (35) ಮತ್ತು ಕುಂಬಾxಜೆ ಉಬ್ರಂಗಳದ ಡಯಾನ (27) ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.
ಕಾಸರಗೋಡು ಸರಕಾರಿ ಶಾಲೆ ಯಲ್ಲಿ ಶಿಕ್ಷಕಿ ಹುದ್ದೆ ದೊರಕಿಸುವುದಾಗಿ ನಂಬಿಸಿ ರಹಿಯಾನತ್‌ರಿಂದ 2024 ಜ. 22ರಂದು 2 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಆರೋಪಿಸಲಾಗಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಯುಡಿ ಕ್ಲರ್ಕ್ ಹುದ್ದೆ ದೊರಕಿಸಿ ಕೊಡುವುದಾಗಿ ನಂಬಿಸಿ 1.48 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಡಯಾನ ಆರೋಪಿಸಿದ್ದಾರೆ.
