
ಪುತ್ತೂರು: ಈ ಜಲಸಿರಿ ಕಾಮಗಾರಿಯ ಅಧ್ವಾನಗಳು ಒಂದೆರಡಲ್ಲ! ಈ ಬಾರಿಯ ರಣ ಮಳೆಗೆ ಪುತ್ತೂರಿನ ಹಲವಾರು ರಸ್ತೆಗಳು ಕೆಟ್ಟು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿರುವ ನಡುವೆ ಈ ಜಲಸಿರಿ ಕಾಮಗಾರಿಯ ಅಧ್ವಾನಗಳು ಈ ಸಮಸ್ಯೆಗೆ ಇನ್ನಷ್ಟು ʼನೀರುʼ ಹೊಯ್ಯುತ್ತಿದೆ!
ಇದಕ್ಕೊಂದು ಉದಾಹರಣೆಯೆಂಬಂತೆ, ಉರ್ಲಾಂಡಿ ಬಳಿ ಬೈಪಾಸ್ ರಸ್ತೆ ಹೆದ್ದಾರಿಗೆ ಸಂಪರ್ಕಿಸುವಲ್ಲಿ ಜಲಸಿರಿ ಕಾಮಗಾರಿಗಾಗಿ ತೋಡಿದ ಹೊಂಡವನ್ನು ಅರ್ಧಂಬರ್ಧ ಮುಚ್ಚಿರುವ ಪರಿಣಾಮ ಮತ್ತು ಇದಕ್ಕೊಂದು ಬ್ಯಾರಿಕೇಡ್ ಅಳವಡಿಸಿರುವುದರಿಂದ ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದೆ. ಈಗಾಗಲೇ ಇಲ್ಲಿ ಎರಡು ಅಪಘಾತಗಳು ನಡೆದಿದೆ.
ಮೊನ್ನೆ ತಾನೆ ಕೆಮ್ಮಾಯಿಯಲ್ಲಿ ರಸ್ತೆ ನಡುವಿನಲ್ಲಿದ್ದ ಅಪಾಯಕಾರಿ ಹೊಂಡವನ್ನು ಮುಚ್ಚಲು ಸ್ವತಃ ಶಾಸಕರೇ ಸೂಚನೆ ಕೊಡಬೇಕಾಯಿತು. ಇದೀಗ ಈ ಅಪಾಯಕಾರಿ ತಿರುವಿನಲ್ಲಿರುವ ಸಮಸ್ಯೆಯನ್ನು ಸರಿಪಡಿಸಲು ಶಾಸಕರೇ ಸೂಚನೆ ಕೊಡುವವರೆಗೆ ಅಧಿಕಾರಿಗಳು ಕಾಯುತ್ತಿದ್ದಾರೆಯೇ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.ಈ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದವರು ಡಾ. ನಝೀರ್ ಅಹಮ್ಮದ್. ಡಾಕ್ಟ್ರ ಈ ಸಾಮಾಜಿಕ ಕಳಕಳಿಯನ್ನು ವಿದ್ಯಮಾನ ತಂಡ ಪ್ರಶಂಸಿಸುತ್ತದೆ.






