
ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಬಾಲಕನೊಬ್ಬ ಯುವತಿಯ ಎದೆ ಮುಟ್ಟಿ ಪರಾರಿಯಾಗಿರುವ ಘಟನೆ ನಗರದ ಬಿಟಿಎಂ ಲೇಔಟ್ ಬಳಿ ನಡೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುವಾಗ ವಿಡಿಯೊ ವ್ಲಾಗ್ ಮಾಡಲು ಯುವತಿ ಮುಂದಾಗಿದ್ದಾಳೆ. ಈ ವೇಳೆ ಎದುರಿನಿಂದ ಸೈಕಲ್‌ನಲ್ಲಿ ಬಂದ ಬಾಲಕ, ಹಾಯ್… ಎನ್ನುತ್ತಾ ಯುವತಿ ಎದೆಯ ಭಾಗಕ್ಕೆ ಕೈ ಹಾಕಿ ಪರಾರಿಯಾಗಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ವಿಡಿಯೊ ಹಂಚಿಕೊಂಡು, ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಕಣ್ಣೀರು ಹಾಕಿದ್ದಾಳೆ.
ಉತ್ತರ ಭಾರತ ಮೂಲದ ನೇಹಾ ಬಿಸ್ವಾಲ್ ಕಿರುಕುಳಕ್ಕೆ ಒಳಗಾದ ಯುವತಿ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವಾಗ ವ್ಲಾಗ್ ಮಾಡಲು ಮುಂದಾದ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ನೇಹಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿದ್ದು, ನಗರದಲ್ಲಿ ಒಬ್ಬಂಟಿಯಾಗಿ ಯುವತಿಯರು ರಸ್ತೆಯಲ್ಲಿ ಓಡಾಡುವುದು ಎಷ್ಟು ಸುರಕ್ಷಿತ ಎಂದು ಪ್ರಶ್ನೆ ಮಾಡಿದ್ದಾಳೆ. ಯುವತಿಯ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು, ಬೆಂಗಳೂರಿನ ಪರಿಸ್ಥಿತಿಯ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸಾರ್ವಜನಿಕರ ಸ್ಥಳದಲ್ಲಿ ಮಹಿಳೆಯ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ನೇಹಾ ಒತ್ತಿ ಹೇಳಿದ್ದು, ಮಹಿಳೆಯರು ಸುರಕ್ಷಿತವಾಗಿ, ಭಯವಿಲ್ಲದೆ ಒಬ್ಬಂಟಿಯಾಗಿ ಹೇಗೆ ಓಡಾಡುವುದು ಎಂದು ಎಂದು ಕಿಡಿಕಾರಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕಷ್ಟು ಬೆಂಬಲ ಸಿಕ್ಕಿದ್ದರೂ, ಪೊಲೀಸರಿಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ನೇಹಾ ನಂತರ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಿಂದ ವಿಡಿಯೋವನ್ನು ತೆಗೆದು ಹಾಕಿದ್ದಾರೆ.
ನೇಹಾ ಇನ್‌ಸ್ಟಾಗ್ರಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ನು ಬೆಂಗಳೂರಿನಲ್ಲಿರುವ ಪಬ್, ಕ್ಲಬ್, ಶಾಪಿಂಗ್ ಮಾಲ್ ಸೇರಿದಂತೆ ಕೋರಮಂಗಲ, ಬಿಟಿಎಂ ಲೇಔಟ್, ಮಡಿವಾಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ವಿಶೇಷತೆಗಳನ್ನು ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲುವ ಹವ್ಯಾಸ ಹೊಂದಿದ್ದಾರೆ.






