ಶಿ ಗ್ಗಾವಿ (ಹಾವೇರಿ ಜಿಲ್ಲೆ): ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಗ ಭರತ್ ಅವರನ್ನು ಗೆಲ್ಲಿಸಲು ಪಣ ತೊಟ್ಟಿರುವ ಸಂಸದ ಬಸವರಾಜ ಬೊಮ್ಮಾಯಿ, ಕ್ಷೇತ್ರದಲ್ಲಿನ ಮುಸ್ಲಿಂ ಸಮುದಾಯದ ಕೆಲ ಮುಖಂಡರ ಸಭೆ ನಡೆಸಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿರುವ ಮುಸ್ಲಿಂ ಮುಖಂಡರೊಬ್ಬರ ಮನೆಯಲ್ಲಿ ಮಂಗಳವಾರ ರಾತ್ರಿ ಸಭೆ ನಡೆಸಿದ ಅವರು, ‘ಮುಸ್ಲಿಂ ಸಮುದಾಯದ ಜೊತೆಗೆ ನಾನಿದ್ದೇನೆ.
ನಿಮ್ಮ ವ್ಯಾಪಾರ-ವಹಿವಾಡುವ ಹೆಚ್ಚಿಸುವ ಮೂಲಕ ಆರ್ಥಿಕ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು’ ಎಂದರು.
‘ಶಿಗ್ಗಾವಿ-ಸವಣೂರ ಕ್ಷೇತ್ರ, ಭಾವೈಕ್ಯತೆ ನೆಲೆಯಾಗಿದೆ. ಸರ್ವ ಧರ್ಮದ ಜನರು ಸಮಾನತೆ, ಒಗ್ಗಟ್ಟಿನಿಂದ ಬಾಳಿ ಬದುಕಬೇಕು. ಕನಕದಾಸರು, ಶರೀಫ್ ಶಿವಯೋಗಿಗಳು ಸೇರಿದಂತೆ ಅನೇಕ ಪುಣ್ಯ ಪುರುಷರ ಪುಣ್ಯ ಭೂಮಿ ನಮ್ಮದಾಗಿದೆ. ಸಾವಿರಾರು ವರ್ಷಗಳಿಂದ ಸಾಮರಸ್ಯದ ಬದುಕು ನಡೆಸಿಕೊಂಡು ಬಂದಿದ್ದೇವೆ’ ಎಂದರು.
‘ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಸಮುದಾಯದ ಜನರನ್ನು ಮತ ಬ್ಯಾಂಕ್ ಮಾಡಿಕೊಂಡಿದೆ. ಚುನಾವಣೆ ಬಂದಾಗ ಮಾತ್ರ ಅವರಿಗೆ ಮುಸ್ಲಿಂ ಸಮುದಾಯ ನೆನಪಾಗುತ್ತಿದೆ. 20 ವರ್ಷಗಳಿಂದ ಸ್ಥಳೀಯ ಮುಸ್ಲಿಂ ಸಮುದಾಯದ ಜನರ ಆಶೋತ್ತರ ಈಡೇರಿಸುವ ಮೂಲಕ ನೆರವಾಗಿದ್ದೇನೆ. ಕ್ಷೇತ್ರದ ಮುಸ್ಲಿಂ ಸಮುದಾಯದವರು ಭರತ್‌ಗೆ ಮತ ನೀಡಿ ಬಹುಮತದಿಂದ ಆಯ್ಕೆ ಮಾಡಬೇಕು’ ಎಂದು ಕೋರಿದರು.
ಇದೇ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಮಂದಿ ಮುಸ್ಲಿಮರು, ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಪುರಸಭೆ ಸದಸ್ಯ ಮುಕ್ಬುಲ್‌ಅಹ್ಮದ ಬೊಮ್ಮನಹಳ್ಳಿ, ನಾಸೀರಅಹ್ಮದ ಹಲ್ಡೆವಾಲೆ, ಮುಖಂಡರಾದ ಖಲಂದರ ಜಂಗಳಿ, ಬಾಗವಾನ್ ಹಾಗೂ ಇತರರು ಸಭೆಯಲ್ಲಿದ್ದರು.