ಜನರು ಜೀವ ಇರುವ ಮತ್ತು ಇಲ್ಲದಿರುವ ಎಲ್ಲದರ ಮೇಲೂ ತನ್ನ ಭಾವನೆಗಳನ್ನು ಹೊಂದಿರುತ್ತಾರೆ. ಆಡಿ ಬೆಳೆದ ಊರು, ಹುಟ್ಟಿದ ಮನೆ, ತಂದೆ ತಾಯಿ ಮೊದಲು ಕೊಡಿಸಿದ ಉಡುಗೊರೆ, ಮೊದ ಮೊದಲು ಖರೀದಿ ಮಾಡಿದ ವಸ್ತು ಹಾಗೂ ಇಷ್ಟಪಟ್ಟವರಿಂದ ಸಿಗುವ ಗಿಫ್ಟ್ ಹೀಗೆ ಪ್ರತಿಯೊಂದು ವಸ್ತುಗಳ ಮೇಲೆ ತನ್ನದೇಯಾದ ವ್ಯಾಮೋಹ ಹೊಂದಿರುತ್ತಾನೆ.

ಕೆಲವರಿಗೆ ವಾಹನಗಳೆಂದರೆ ತುಂಬಾ ಇಷ್ಟ. ಬಹಳ ಹಿಂದೆ ಸೈಕಲ್ಗಳ ಮೇಲೆ ಜನರಿಗೆ ಹೆಚ್ಚಿನ ಪ್ರೀತಿ ಇರುತ್ತಿತ್ತು. ಆದರೆ, ಈಗ ಬೈಕ್ ಮತ್ತು ಕಾರುಗಳ ಕ್ರೇಜ್ ಹೆಚ್ಚಾಗಿದೆ. ಕಾರು ಮತ್ತು ಬೈಕ್ಗಳನ್ನು ಹುಚ್ಚರಂತೆ ಪ್ರೀತಿಸುವ ಅನೇಕ ಮಂದಿ ಇದಾರೆ. ಅವುಗಳಿಗಾಗಿ ಲಕ್ಷಾಂತರ ಹಣವನ್ನು ಸಹ ನೀರಿನಂತೆ ಸುರಿಯುತ್ತಾರೆ. ಇನ್ನು ಕೆಲವರಿಗೆ ಕೆಲವೊಂದು ವಸ್ತುಗಳು ಅಥವಾ ವಾಹನಗಳು ಅದೃಷ್ಟವನ್ನು ತಂದುಕೊಡುತ್ತವೆ. ಈ ಬೈಕ್ ಅಥವಾ ಕಾರು ಬಂದ ಮೇಲೆ ನಮ್ಮ ಅದೃಷ್ಟವೇ ಬದಲಾಯಿತು ಎಂದು ಹೇಳಿರುವ ಅನೇಕ ಮಂದಿಯನ್ನು ನೀವು ನೋಡಿರುತ್ತೀರಿ. ಹೀಗಾಗಿ ಎಷ್ಟೇ ಕಷ್ಟಬಂದರೂ ತಮ್ಮಿಷ್ಟದ ಅಥವಾ ಲಕ್ಕಿ ವಾಹನಗಳನ್ನು ಯಾರಿಗೂ ಮಾರುವುದಿಲ್ಲ ಮತ್ತು ಎಂದಿಗೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ.

ತಾಜಾ ಸಂಗತಿ ಏನೆಂದರೆ, ಗುಜರಾತಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಇಲ್ಲಿನ ಅಮ್ರೇಲಿ ಜಿಲ್ಲೆಯ ಲಾಠಿ ತಾಲೂಕಿನ ಪದೋಶಿಂಗ ಗ್ರಾಮದ ವ್ಯಕ್ತಿಯೊಬ್ಬ ತನ್ನ ಭಾರವಾದ ಹೃದಯದಿಂದಲೇ ತನ್ನ ಪ್ರೀತಿಯ ಕಾರನ್ನು ಸಮಾಧಿ ಮಾಡಿದ್ದಾನೆ. ಕುಟುಂಬ ಸಮೇತ ಕಾರಿಗೆ ಭಾವುಕ ವಿದಾಯ ಹೇಳಿದ್ದಾರೆ. ಆ ವ್ಯಕ್ತಿಯ ಹೆಸರು ಸಂಜಯ್‌ಭಾಯ್ ಕಲುಭಾಯಿ ಪೊಲ್ರಾಈತ 2006ರಲ್ಲಿ ಈ ಕಾರನ್ನು ಖರೀದಿಸಿದ್ದು, ಈ ಕಾರಿನ ನೆನಪನ್ನು ಶಾಶ್ವತವಾಗಿ ಇರಿಸಲು ಕಾರನ್ನು ಸಮಾಧಿ ಮಾಡಿದ್ದಾನೆ.

ಕಾರನ್ನು ಸಮಾಧಿ ಮಾಡುವ ಮುನ್ನ 4 ಪುಟಗಳ ಆಹ್ವಾನ ಪತ್ರಿಕೆಯನ್ನು ಸುಮಾರು 2000 ಅತಿಥಿಗಳಿಗೆ ಸಂಜಯ್‌ಭಾಯ್ ಕಳುಹಿಸಿದ್ದರು. ಈ ಕಾರು 2006 ರಿಂದ ನಮ್ಮ ಕುಟುಂಬದೊಂದಿಗೆ ಇದೆ. ಕುಟುಂಬದ ಒಳ್ಳೆಯದು ಮತ್ತು ಕೆಟ್ಟದ್ದು ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಕಾರು ಒಟ್ಟಿಗೆ ಇರುತ್ತಿತ್ತು. ಈ ಕಾರನ್ನು ಪಡೆದ ನಂತರವೇ ನಾವು ಜೀವನದಲ್ಲಿ ಪ್ರಗತಿ ಹೊಂದಿದ್ದೇವೆ. ಈ ಕಾರಿನಿಂದಲೇ ನಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಿದೆ. ಈ ಕಾರು ನಮ್ಮ ಹೃದಯ ಮತ್ತು ನಮ್ಮ ಭಾವನೆಗಳಾಗಿದೆ. ಇತರರಿಗೆ ಇದು ಕೇವಲ ಕಾರು ಆದರೆ, ನಮಗೆ ಇದು ಜೀವನ. ನನ್ನ ನೆಚ್ಚಿನ ಕಾರನ್ನು ನವೆಂಬರ್ 7ರಂದು ನಮ್ಮ ವಾಡಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು.

ಕರ್ಕಳದ ಚಿತಾಗಾರದಲ್ಲಿ ಪೂಜಾ ವಿಧಿವಿಧಾನ ನೆರವೇರಲಿದೆ. ಸಂತರು ಮತ್ತು ಮಹಂತರಿಂದ ಸಮಯ ಸ್ಮರಣೆ ನಡೆಯಲಿದೆ. ಬಳಿಕ ಸಮಾಧಿ ಸ್ಥಳಕ್ಕೆ ಕಾರು ಹೊರಡಲಿದ್ದು, ಅಂತಿಮ ಸಂಸ್ಕಾರ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಂಜೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಇನ್ನು ಅಂತ್ಯ ಸಂಸ್ಕಾರಕ್ಕೆ ಬಂದವರಿಗೆ ಪೂರಿ, ಚಪಾತಿ, ಸಬ್ಜಿ ಮತ್ತು ಲಾಡುಗಳನ್ನು ಬಡಿಸಲಾಯಿತು.

ಜೆಸಿಬಿ ಮೂಲಕ ಹಳ್ಳವನ್ನು ತೋಡಿ ಕಾರನ್ನು ಸಮಾಧಿ ಮಾಡಲಾಯಿತು. ಬಳಿಕ ಕಾರಿನ ಸಮಾಧಿ ಸುತ್ತ ಗಿಡಗಳನ್ನು ನೆಡಲಾಯಿತು. ರಾತ್ರಿ ಕಾರ್ಯಕ್ರಮದಲ್ಲಿ ಭಜನಾ ಸಾಂತ್ವಾನಿ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಯಿತು. ಈ ಭಜನಾ ಸಾಂತ್ವಾನಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸನ್ಯಾಸಿಗಳು, ಸಂತರು, ಮಹಾಂತರು ಉಪಸ್ಥಿತರಿದ್ದರು. ಒಟ್ಟಾರೆ, ಪೊಲ್ರಾ ಕುಟುಂಬ ತಮ್ಮ ಪ್ರೀತಿಯ ಕಾರಿಗೆ ವಿದಾಯ ಹೇಳಿದ ಭಾವುಕ ಕ್ಷಣಕ್ಕೆ ಇಡೀ ಊರೇ ಸಾಕ್ಷಿಯಾಯಿತು

Leave a Reply

Your email address will not be published. Required fields are marked *

Join WhatsApp Group
error: Content is protected !!