ಮಂಗಳೂರು, ನ.21: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಉಪನ್ಯಾಸಕಿಯಾಗಿದ್ದ ರಚಿತಾ ಕಬ್ರಾಲ್ (43) ಕೆಲವು ಕಾಲದ ಅಸೌಖ್ಯದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಲ್ಮಠ ಸಿಎಸ್ಐ ಚರ್ಚಿನಲ್ಲಿ ಫಾದರ್ ಆಗಿದ್ದ ದಿ. ರೆವರೆಂಡ್ ಹನಿಬಾಲ್ ಕಬ್ರಾಲ್ ಅವರ ಪುತ್ರಿಯಾಗಿರುವ ರಚಿತಾ ಕಬ್ರಾಲ್ ಕಂಕನಾಡಿ ರೋಶನಿ ನಿಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದರು. ಆನಂತರ, ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಸೇವೆ ಮಾಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ಅಲೋಶಿಯಸ್ ಕಾಲೇಜು ಸೇರಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯಕರ ಹವ್ಯಾಸಗಳಿಂದಾಗಿ ದೇಹಕ್ಕೆ ಅನಾರೋಗ್ಯ ಅಂಟಿಕೊಂಡಿದ್ದು, ಇತ್ತೀಚೆಗೆ ತೀವ್ರ ಮಧುಮೇಹದಿಂದಾಗಿ ಕಿಡ್ನಿ ಫೈಲ್ಯೂರ್ ಆಗಿತ್ತು ಎನ್ನಲಾಗಿದೆ. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ರಚಿತಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇವರಿಗೆ ಒಬ್ಬಳು ಪುತ್ರಿಯಿದ್ದು, ಪಿಯುಸಿ ಓದುತ್ತಿದ್ದಾರೆ. ರಚಿತಾ ಅವರು ತಂದೆ, ತಾಯಿ ಈ ಹಿಂದೆಯೇ ತೀರಿಕೊಂಡಿದ್ದರು.
ವಾರದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿ ಯುವ ಉಪನ್ಯಾಸಕಿಯಾಗಿದ್ದ ಗ್ಲೋರಿಯಾ ರೋಡ್ರಿಗಸ್ ಫುಡ್ ಪಾಯ್ಸನ್ ಕಾರಣದಿಂದ ಅನಾರೋಗ್ಯವುಂಟಾಗಿ ಕಾಲೇಜಿನ ಮೆಟ್ಟಿಲಿನಲ್ಲಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೇವಲ 23 ವರ್ಷದಲ್ಲಿ ಉಪನ್ಯಾಸಕಿಯೊಬ್ಬರು ಮೃತಪಟ್ಟಿದ್ದು ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ಶಾಕ್ ನೀಡಿತ್ತು. ಇದೀಗ ಮತ್ತೊಬ್ಬ ಉಪನ್ಯಾಸಕಿ ಅಕಾಲಿಕ ಸಾವು ಕಂಡಿದ್ದಾರೆ.