ಕಾಸರಗೋಡು, ಜ.12: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಉಪಾಧ್ಯಕ್ಷರೂ, ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮೊಗ್ರಾಲ್ ಕಡವತ್ ದಾರುಸ್ಸಲಾಮ್ ನಿವಾಸಿ ಯು.ಎಂ. ಅಬ್ದುರ್ರಹ್ಮಾನ್ ಮುಸ್ಲಿಯಾರ್ (86) ಅವರು ಸೋಮವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಮನೆಗೆ ಕರೆತರಲಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದರು.
1939ರ ನವೆಂಬರ್ 2ರಂದು ಅಬ್ದುಲ್ ಖಾದಿರ್–ಖದೀಜ ದಂಪತಿಯ ಪುತ್ರನಾಗಿ ಜನಿಸಿದ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರು ಶಾಲಾ ಶಿಕ್ಷಣದ ಬಳಿಕ 1963–64ರಲ್ಲಿ ಫಾಝಿಲ್ ಬಾಖವಿ ಪದವಿ ಪಡೆದಿದ್ದರು. ಮಂಗಳೂರಿನ ಫರಂಗಿಪೇಟೆ ಜುಮಾ ಮಸೀದಿ, ಅಝರಿಯ್ಯಾ ಕಾಲೇಜು ಸೇರಿದಂತೆ ಕೇರಳ–ಕರ್ನಾಟಕದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಅಧ್ಯಯನ ನಡೆಸಿದ್ದರು.
1992ರಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿದ್ದ ಅವರು, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಸ್‌ವೈಎಸ್ ರಾಜ್ಯ ಕೌನ್ಸಿಲ್ ಸದಸ್ಯ ಸೇರಿದಂತೆ ಹಲವು ಜವಾಬ್ದಾರಿಗಳನ್ನು ವಹಿಸಿದ್ದರು. ಬದಿಯಡ್ಕ ಕಣ್ಣಿಯತ್ ಅಕಾಡಮಿ ಅಧ್ಯಕ್ಷ ಹಾಗೂ ಚೆಮಾಡ್ ದಾರುಲ್ ಇಸ್ಲಾಮಿಕ್ ವಿವಿಯ ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಕುಂಬಳೆ, ಮೊಗ್ರಾಲ್, ಹೊಸಂಗಡಿ ಸೇರಿದಂತೆ ಅನೇಕ ಜುಮಾ ಮಸೀದಿಗಳಲ್ಲಿ ದರ್ಸ್ ನಡೆಸಿ ಧಾರ್ಮಿಕ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದರು.
ಮೃತರು ಪತ್ನಿ, ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಸೋಮವಾರ ಸಂಜೆ ಮೊಗ್ರಾಲ್ ಕಡಪುರಂ ದೊಡ್ಡ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ನೆರವೇರಿತು.
ಸಂತಾಪ ಸೂಚನೆ: ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರ ನಿಧನಕ್ಕೆ ಕರ್ನಾಟಕ ಮುಶಾವರ ಅಧ್ಯಕ್ಷ ಝನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ. ದಾರಿಮಿ, ಕಾರ್ಯದರ್ಶಿ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!