ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 6 ಕ್ಕೆ 6 ಸ್ಥಾನಗಳನ್ನು ಭರ್ಜರಿಯಾಗಿ ಗೆದ್ದಿದೆ. ಬಿಜೆಪಿ ಗೆದ್ದಿದ್ದ ಒಂದು ಸ್ಥಾನವನ್ನೂ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರ್‌ಜಿ ಕರ್ ಮೆಡಿಕಲ್ ಕಾಲೇಜು ಟ್ರೈನಿ ವೈದ್ಯೆ ಅ*ತ್ಯಾಚಾರ ಮತ್ತು ಹ*ತ್ಯೆ ಘಟನೆಯ ಕುರಿತು ನಡೆಯುತ್ತಿರುವ ಭಾರೀ ಪ್ರತಿಭಟನೆಗಳು ಮತದಾರರ ಮನಸ್ಥಿತಿ ಬದಲಿಸುವಲ್ಲಿ ವಿಫಲವಾಗಿದೆ.ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ತನ್ನ ರಾಜಕೀಯ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ಬಿಜೆಪಿ ಪ್ರತಿನಿಧಿಸುತ್ತಿದ್ದ ಮದರಿಹತ್ ಕ್ಷೇತ್ರವನ್ನೂ ಟಿಎಂಸಿ ವಶಪಡಿಸಿಕೊಂಡು ಶಾಕ್ ನೀಡಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದ ನಂತರ ತಮ್ಮ ಅಸೆಂಬ್ಲಿ ಸ್ಥಾನಗಳಿಗೆ ಶಾಸಕರು ರಾಜೀನಾಮೆ ನೀಡಿದ್ದರಿಂದ ಆರು ಕ್ಷೇತ್ರಗಳಾದ ನೈಹಾಟಿ, ಹರೋವಾ, ಮೇದಿನಿಪುರ್, ತಲ್ದಂಗ್ರಾ, ಸಿತಾಯಿ (SC), ಮತ್ತು ಮದರಿಹತ್ (ST) ನಲ್ಲಿ ಉಪ ಚುನಾವಣೆ ನಡೆದಿತ್ತು.
ಈ ಗೆಲುವಿನೊಂದಿಗೆ, 294 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ TMC ಯ ಸಂಖ್ಯೆ 216 ಕ್ಕೆ ಏರಿದೆ. 2021ರಲ್ಲಿ 77 ಇದ್ದ ಬಿಜೆಪಿಯ ಸಂಖ್ಯೆ 69ಕ್ಕೆ ಕುಸಿದಿದೆ














