ಬ ಳ್ಳಾರಿ: ಆಂಧ್ರ ಪ್ರದೇಶದ (Andhra Pradesh) ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ (Ballari) ತಾಲೂಕಿನ ವಿಡುಪನಕಲ್ಲು- ಚೇಳ್ಳಗುರ್ಕಿ ಮಧ್ಯೆ ಇಂದು ಬೆಳಗಿನ ಜಾವ 4 ಗಂಟೆಗೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರನ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಬಳ್ಳಾರಿಯ ಮೂವರು ಸಾವನ್ನಪ್ಪಿದ್ದು ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಸ್ಥಳದಲ್ಲೇ ಮೂವರ ಸಾವು; ಓರ್ವ ವೈದ್ಯರ ಸ್ಥಿತಿ ಗಂಭೀರ
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ.ಗೋವಿಂದರಾಜುಲು, ನೇತ್ರ ತಜ್ಞ ಡಾ.ಯೋಗೀಶ್ ಮತ್ತು ವಕೀಲ ವೆಂಕಟನಾಯ್ಡು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಖಾಸಗಿ ವೈದ್ಯ, ಗಂಧರ್ವ ಗಿರಿ ಎಸ್ಟೇಟ್ ಮಾಲೀಕ ಡಾ.ಅಮರೇಗೌಡ ಪಾಟೀಲ್ ಅವರು ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಚೇಳ್ಳಗುರ್ಕಿ ಇನ್ನು ಐದು ಕಿಲೋ ಮೀಟರ್ ಇರುವಾಗ ಅಪಘಾತ
ಈ ನಾಲ್ವರು ಬ್ಯಾಂಕಾಕ್ ಪ್ರವಾಸ ಮುಗಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಅನಂತಪುರಂ ಮಾರ್ಗವಾಗಿ ಬಳ್ಳಾರಿಗೆ ಆಗಮಿಸುತ್ತಿದ್ದರು. ಪೋರ್ಡ್ ಎಂಡೆವರ ಕಾರಿನಲ್ಲಿ ಬರುವ ವೇಳೆ, ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದನು. ಚೇಳ್ಳಗುರ್ಕಿ ಇನ್ನು ಐದು ಕಿಲೋ ಮೀಟರ್ ಇರುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ.
ಡಾ. ಅಮರೇಗೌಡಗೆ ಬಿಮ್ಸ್ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆ
ಅಪಘಾತದಲ್ಲಿ ಗಾಯಗೊಂಡಿರುವ ಅಮರೇಗೌಡ ಅವರು ಬಿಮ್ಸ್ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಶವಗಳನ್ನು ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.
ಬಡ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಖ್ಯಾತರಾಗಿದ್ದ ವೈದ್ಯರು
ಡಾ.ಗೋವಿಂದರಾಜುಲು ಅವರು ಈ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಖ್ಯಾತರಾಗಿದ್ದರು. ಬಡ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅವರ ಗುಣ ಮೆಚ್ಚುಗೆಯಾಗಿತ್ತು. ಇವರ ಸಾವಿಗೆ ಬಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಮತ್ತು ಸಿಬ್ಬಂದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.