ಕೇರಳದ ಪಾಲಕ್ಕಾಡ್ ನಲ್ಲಿಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿನಿಯರು ದುರಂತ ಸಾವನ್ನಪ್ಪಿದ್ದರು. ಸ್ನೇಹಿತರಾದ ರಿದಾ ಫಾತಿಮಾ, ಇರ್ಫಾನಾ ಶೆರಿನ್, ನಿದಾ ಫಾತಿಮಾ ಮತ್ತು ಆಯಿಷಾ ಸಾವಿಗೀಡಾಗಿದ್ದು, ಅಪಘಾತದ ನಂತರ ಪಾಲಕ್ಕಾಡ್‌ನಲ್ಲಿ ಒಟ್ಟಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಅಕ್ಕಪಕ್ಕದಲ್ಲಿಯೇ ನಡೆದ ಅವರ ಹೃದಯವಿದ್ರಾವಕ ಅಂತ್ಯಕ್ರಿಯೆ ಸ್ಥಳೀಯರನ್ನು ಭಾವುಕರನ್ನಾಗುವಂತೆ ಮಾಡಿದೆ.

ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನಾಲ್ವರು ಸ್ನೇಹಿತೆಯರನ್ನು ಒಟ್ಟಿಗೆ ಅಂತ್ಯಕ್ರಿಯೆ ಮಾಡಲಾಗಿದ್ದು, ಇದು ಜೀವನ ಮತ್ತು ಸಾವು ಎರಡರಲ್ಲೂ ಒಂದಾದ ಅವರ ಅವಿನಾಭಾವ ಸಂಬಂಧವನ್ನು ಸಂಕೇತಿಸಿದೆ. ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ರಿದಾ ಫಾತಿಮಾ, ಇರ್ಫಾನಾ ಶೆರಿನ್, ನಿದಾ ಫಾತಿಮಾ ಮತ್ತು ಆಯಿಷಾ ಅವರನ್ನು ತುಪ್ಪನಾಡು ಜುಮಾ ಮಸೀದಿ ಸ್ಮಶಾನದಲ್ಲಿ ಅಕ್ಕಪಕ್ಕದಲ್ಲಿ ಸಮಾಧಿ ಮಾಡಲಾಗಿದೆ.

ಕ್ರಿಸ್‌ಮಸ್ ಪರೀಕ್ಷೆ ಮುಗಿಸಿದ್ದ ಬಾಲಕಿಯರು ಪಾಲಕ್ಕಾಡ್-ಕೋಝಿಕೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸರಕು ಸಾಗಣೆ ಲಾರಿಯೊಂದು ನಿಯಂತ್ರಣ ತಪ್ಪಿ ಅವರಿಗೆ ಡಿಕ್ಕಿ ಹೊಡೆದಿತ್ತು. ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಸಾರ್ವಜನಿಕರ ದರ್ಶನಕ್ಕಾಗಿ ತುಪ್ಪನಾಡ್ ಕರಿಂಬನಕಲ್ ಸಭಾಂಗಣಕ್ಕೆ ಸ್ಥಳಾಂತರಿಸುವ ಮೊದಲು ವಿದ್ಯಾರ್ಥಿಗಳು ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದ್ದರು. ಶುಕ್ರವಾರ ಬೆಳಿಗ್ಗೆ ಅವರವರ ಮನೆಗೆ ಮೃತದೇಹ ತರಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ಸ್ಥಳೀಯ ಗಣ್ಯರು ಆಗಮಿಸಿ ನಮನ ಸಲ್ಲಿಸಿದರು.

ಸಚಿವರಾದ ಎಂ.ಬಿ. ರಾಜೇಶ್ ಮತ್ತು ಕೆ. ಕೃಷ್ಣನ್‌ಕುಟ್ಟಿ, ಸಾರ್ವಜನಿಕ ಪ್ರತಿನಿಧಿಗಳು, ಅಧಿಕಾರಿಗಳು, ಜಿಲ್ಲಾಧಿಕಾರಿ ಡಾ. ಎಸ್. ಚಿತ್ರಾ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ತುಪ್ಪನಾಡು ಜುಮಾ ಮಸೀದಿಯಲ್ಲಿ, ಬಂಧುಗಳು ಮತ್ತು ಸ್ಥಳೀಯರು ತೀವ್ರವಾಗಿ ಕಂಬನಿ ಮಿಡಿದು ಅಂತಿಮ ವಿದಾಯ ಹೇಳಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!