
ಕೊಣಾಜೆ :ಹೃದಯಾಘಾತದಿಂದ ಮೃತಪಟ್ಟ ವಿವಾಹಿತ ಯುವಕನೊರ್ವನ ನಿಧನಕ್ಕೆ ಬೋಳಿಯಾರ್ ಮಸೀದಿ ಯೊಂದರಲ್ಲಿ ಸಂತಾಪ ವ್ಯಕ್ತಪಡಿಸಿ, ಅವರ ಪ್ರಾಮಾಣಿಕ ಸೇವೆಯನ್ನು ಸ್ಮರಣಿಸಿರುವ ಘಟನೆ ಬೋಳಿಯಾರ್ ನಲ್ಲಿ ನಡೆದಿದೆ.
ಬೋಳಿಯಾರ್ ನ ಯುವ ಉದ್ಯಮಿ ಸಂತೋಷ್ ನಾಯಕ್ ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿ ದ್ದರು.
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಂತೋಷ್ ನಾಯಕ್, ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ರಂಗಸಜ್ಜಿಕೆ, ಮೇಕಪ್ ಮತ್ತಿತರ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು, ಪರಿಶ್ರಮದಿಂದ ಉದ್ಯಮಿಯಾಗಿ ರೂಪುಗೊಂಡರು. ಕಂಪ್ಯೂಟರ್ ಕಲಿತು 2009ರಿಂದ ಬೋಳಿಯಾರಿನಲ್ಲಿ ಫ್ಲಕ್ಸ್ ಉದ್ಯಮ ಆರಂಭಿಸಿ ಯಶಸ್ವಿಯಾದರು. ಹಲವು ಮಂದಿಗೆ ಉದ್ಯೋಗ ದಾತರಾಗಿದ್ದರು. ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಸ್ಥಳೀಯ ಸಂಘ ಸಂಸ್ಥೆಗಳಿಗೆ ನೆರವಾಗುತ್ತಾ ಜಾತಿ, ಮತ ಭೇದವಿಲ್ಲದೆ ಜನಾನುರಾಗಿಯಾಗಿದ್ದರು.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೋಳಿಯಾರ್ ಮಸೀದಿಯ ನವೀಕೃತ ಕಟ್ಟಡದ ಉದ್ಘಾಟನೆಯು ನಡೆದಿತ್ತು. ಈ ಮಸೀದಿಯ ಉದ್ಘಾಟನೆಗೆ ಶುಭಾಶಯ ಕೋರುವ ಫ್ಲೆಕ್ಸ್ ಅನ್ನು ಸಂತೋಷ್ ಅವರಿಗೆ ವಹಿಸಿ ಕೊಡಲಾಗಿತ್ತು. ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ನಿಷ್ಢೆಯಿಂದ ನಿರ್ವಹಿಸಿದ್ದರು. ಅಲ್ಲದೆ ಉದ್ಘಾಟನೆ ದಿನದಂದು ಮಸೀದಿಗೂ ಆಗಮಿಸಿ ಇದು ನಮ್ಮದೇ ಊರಿನ ಮಸೀದಿ, ಪ್ರಚಾರದ ಕಟೌಟನ್ನು ಉತ್ತಮವಾಗಿ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ಮಸೀದಿಯ ಸಂಘಟಕರಲ್ಲಿ ತಿಳಿಸಿದ್ದರು.
ಮಸೀದಿಯ ಉದ್ಘಾಟನೆ ದಿನದಂದೇ ಸಂತೋಷ್ ಅವರ ಮರಣದ ವಾರ್ತೆ ಕೇಳಿ ಬಂದಿದ್ದು, ಇದೇ ಸಂದರ್ಭ ಮಸೀದಿಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಘಟಕರು ಸಂತೋಷ್ ಅವರ ಪ್ರಾಮಾಣಿಕತೆ, ಸೌಹಾರ್ದತೆಯ ಪ್ರೀತಿಯನ್ನು ಹಾಗೂ ಮಸೀದಿಗಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಣಿಸಿದ್ದಾರೆ.
