
ಪುತ್ತೂರು; ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪುತ್ತೂರು ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಮಾ.೮ ರಂದು ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ ಹಾಗೂ ವಿವಿಧತೆಯಲ್ಲಿ ಏಕತೆ ವಿಶಿಷ್ಠ ವಾಹನ ಜಾಥಾ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಚಂಚಲ ತೇಜೋಮಯ ಅವರು ತಿಳಿಸಿದರು.
ಬುಧವಾರ ಪುತ್ತೂರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ೩೭ ವರ್ಷಗಳಿಂದ ಮಹಿಳಾ ಒಕ್ಕೂಟ ಮಹಿಳೆಯರ ಸಮಗ್ರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಸಲಾಗುತ್ತಿದೆ. ಕರಾವಳ ಕರ್ನಾಟಕದ ಮಹಿಳೆಯರು ಈಗ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಜಿಲ್ಲಾ ಒಕ್ಕೂಟದಿಂದ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಈ ಮಹಿಳಾ ದಿನಾಚರಣೆಯ ಆಯೋಜನೆಗೊಂಡಿದೆ ಎಂದವರು ತಿಳಿಸಿದರು.
ಪುತ್ತೂರು ದೇವಳದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಉಷಾ ನಾಯಕ್ ವಹಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ, ನಗರಸಭಾ ಅಧ್ಯಕ್ಷೆ ಲೀಲಾವತಿ ನಾಯ್ಕ್, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪ ಪ್ರಧಾನ ವ್ಯವಸ್ಥಾಪಕಿ ಭವಾನಿ ಪ್ರಭು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪಗ್ರತಿ ಆಸ್ಪತ್ರೆಯ ವೈದ್ಯೆ ಡಾ. ಸುಧಾ ಎಸ್.ರಾವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶಿಷ್ಠ ವಾಹನ ಜಾಥಾ
ಕಾರ್ಯಕ್ರಮ ಮೊದಲು ದರ್ಬೆಯಿಂದ ಮಹಿಳೆಯರ ವಾಹನ ಜಾಥಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೯ ಗಂಟೆಗೆ ಮಹಿಳೆಯರೇ ಎಲ್ಲಾ ಬಗೆಯ ವಾಹನಗಳನ್ನು ಚಲಾಯಿಸುವ ಈ ವಾಹನ ಜಾಥಾ ಪುತ್ತೂರು ಮಹಾಲಿಂಗೇಶ್ವರ ದೇವಳದ ತನಕ ನಡೆಯಲಿದೆ. ಅಟೋ ರಿಕ್ಷಾದಿಂದ ಹಿಡಿದು ಬಸ್ ತನಕ ಎಲ್ಲಾ ಬಗೆಯ ವಾಹನಗಳು ಈ ಜಾಥಾದಲ್ಲಿ ಭಾಗಿಯಾಗಲಿವೆ ಎಂದು ಅವರು ತಿಳಿಸಿದರು.
ಮಹಿಳಾ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಪ್ರತೀ ತಾಲೂಕಿನ ಓರ್ವರಂತೆ ಒಟ್ಟು ೭ ಮಂದಿಗೆ `ಮಹಿಳಾ ಸಾಧಕಿ’ ಸನ್ಮಾನ ನಡೆಯಲಿದೆ. ಪುತ್ತೂರಿನ ಶಾರದಾ ಭಟ್ ಕೊಡೆಂಕೇರಿ, ಮಂಗಳೂರಿನ ಪ್ರತೀಕ್ಷಾ ಪ್ರಭು, ಮೂಲ್ಕಿಯ ಮರ್ಸಿವೀಣಾ ಡಿಸೋಜ, ಬಂಟ್ವಾಳದ ಕಮಲ, ಸುಳ್ಯದ ಸೌಂದರ್ಯರಾಜ್ ಮತ್ತು ಉಳ್ಳಾಲ ತಾಲೂಕಿನ ಮುತ್ತು ಎನ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಉಷಾ ನಾಯಕ್, ಗೌರವ ಸಲಹೆಗಾರರಾದ ಪ್ರೇಮಲತಾ ಟಿ.ರಾವ್, ತಾಲೂಕುಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗಡೆ, ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಹಾಗೂ ಜಿಲ್ಲಾ ಒಕ್ಕೂಟದ ಕೋಶಾಧಿಕಾರಿ ರೇಖಾ ಶೆಟ್ಟಿ ಉಪಸ್ಥಿತರಿದ್ದರು.
