ಬೆಳ್ತಂಗಡಿ : ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ವಿವಿಧ ಜಾತಿಯ ಮರಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಅರಣ್ಯ ಸಂಚಾರಿ ದಳ(FMS)ದ ಅಧಿಕಾರಿಗಳು ಬೆಳ್ತಂಗಡಿಯ ಬೆದ್ರಬೆಟ್ಟುವಿನಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ – ಕೊಲ್ಲಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬೆಳ್ತಂಗಡಿ ಕಡೆಗೆ ಅಕ್ರಮವಾಗಿ ವಿವಿಧ ಜಾತಿಯ ಮರಗಳನ್ನು ಅಶೋಕ್ ಲೈಲಾಂಡ್ ಕಂಪನಿಯ KA-19-AE-6067 ಸಂಖ್ಯೆಯ ಲಾರಿಯಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಮಂಗಳೂರು ಅರಣ್ಯ ಸಂಚಾರಿ ದಳದ(FMS) ಅಧಿಕಾರಿಗಳಿಗೆ ಖಚಿತ ಮಾಹಿತಿ ಬಂದಿದ್ದು ತಕ್ಷಣ ಕಾರ್ಯಾಚರಣೆಗಿಳಿದ ತಂಡ ಮಾ.6 ರಂದು ರಾತ್ರಿ ಸುಮಾರು 8:45 ಕ್ಕೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ರಸ್ತೆಯಲ್ಲಿ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಯಾವುದೇ ದಾಖಲೆ ಇಲ್ಲದೆ ಸಾಗಾಟ ಮಾಡಿರುವುದು ಪತ್ತೆಯಾಗಿದೆ.

ಲಾರಿ ಮತ್ತು ಮರಗಳನ್ನು ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ದಾಸ್ತಾನು ಕಚೇರಿಗೆ ತಂದು ಮಾ.7 ರಂದು ಮಹಜರು ನಡೆಸಿದಾಗ ಲಾರಿಯಲ್ಲಿ ವಿವಿಧ ಜಾತಿಯ 11.270 ಘನ ಮೀಟರ್ ಮರ ಪತ್ತೆಯಾಗಿದ್ದು. ಲಾರಿ ಮತ್ತು ಮರದ ಮೌಲ್ಯ ಸುಮಾರು 15 ಲಕ್ಷವಾಗಿದೆ. ಲಾರಿ ಚಾಲಕ ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ನಿವಾಸಿ ಮೊಹಮ್ಮದ್ ಅವರ ಮಗ ಸಿದ್ದಿಕ್ ವಿರುದ್ಧ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ  ಮಂಗಳೂರು ಅರಣ್ಯ ಸಂಚಾರಿ ದಳದ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೂಜಾರಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಸಿದ್ದಿಕ್ ಗೆ ತನಿಖೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.

ಮಂಗಳೂರು ಅರಣ್ಯ ಸಂಚಾರಿ ದಳ(FMS)ದ ವಿಭಾಗೀಯ ಅರಣ್ಯ ಅಧಿಕಾರಿ(DFO) ಶ್ರೀಕಾಂತ್ ಕಣದಾಲ್ಲಿ ನೇತೃತ್ವದಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೂಜಾರಿ, ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಮತ್ತು ವಿನಯ ಕುಮಾರ್, ವಾಹನ ಚಾಲಕ ಜಯಪ್ರಕಾಶ್ ಹಾಗೂ ಬೆಳ್ತಂಗಡಿ ವಲಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ನಾಯ್ಕ್, ಗಸ್ತು ವನಪಾಲಕ ಪರಶುರಾಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!