
ಪ್ರ ಸಿದ್ಧ ಬೆಂಗಳೂರು ಕರಗ ಮಹೋತ್ಸವದ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ರಥೋತ್ಸವ ನಿನ್ನೆ ಭರ್ಜರಿಯಾಗಿ ನಡೆಯಿತು. ದ್ರೌಪದಮ್ಮ ಕರಗ ಹೊತ್ತ ಪೂಜಾರಿ ಜ್ಞಾನೇಂದ್ರ ದೇವಾಲಯದಲ್ಲಿ ಪೂಜೆ ಮುಗಿದ ಬಳಿಕ ರಥವನ್ನು ಸುತ್ತುಹಾಕಿ ನಗರಪ್ರದಕ್ಷಿಣೆಗೆ ಹೊರಟರು.
ರಾತ್ರಿ ಮಳೆ ಬಂದ ಕಾರಣ ಒಂದು ಗಂಟೆ ತಡವಾಗಿ ಆರಂಭಗೊಂಡ ಕರಗ ಅಣ್ಣಮ್ಮನ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳಿಗೂ ಭೇಟಿ ನೀಡಿದೆ.
ನಗರದ ಬೀದಿಗಳಲ್ಲಿ ಸಾಗಿದ ಕರಗ ಮಹೋತ್ಸವವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡಿದ್ದು ದೇವರಿಗೆ ಜೈಕಾರ ಕೂಗಿದರು.
ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕರಗ ಕಾಟನ್‌ಪೇಟೆಯಲ್ಲಿನ ಹಜರತ್ ತವಕಲ್ ಮಸ್ತಾನ್ ದರ್ಗಾಗೂ ಭೇಟಿ ನೀಡಿದೆ. ಕರಗ ಈ ದರ್ಗಾ ಪ್ರವೇಶಿಸಿದ ಕೂಡಲೇ ದರ್ಗಾದ ಪೂಜಾವರ್ ಕರಗಕ್ಕೆ ಹಾರ ಹಾಕಿ ದೃಷ್ಟಿ ತೆಗೆಯುತ್ತಾರೆ. ಬಳಿಕ ಕರಗ ದರ್ಗಾವನ್ನು ಮೂರು ಸುತ್ತು ಸುತ್ತು ಹಾಕಲಾಗುತ್ತೆ. ನಂತರ ಪರಸ್ಪರ ನಿಂಬೆ ಹಣ್ಣುಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತೆ.
ಈ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಬೆಂಗಳೂರು ಭಾವೈಕ್ಯತೆಯ ತಾಣವಾಗಿತ್ತು ಎಂಬುದನ್ನು ಈ ಮೂಲಕ ಅರಿಯಬಹುದಾಗಿದೆ. ಹಿಂದೂ – ಮುಸ್ಲಿಂ ನಡುವೆ ಕೋಮುಗಲಭೆ ಎಬ್ಬಿಸುವವರ ವಿರುದ್ಧ ಬೇಸರ ಹೊರಹಾಕಿದ ದರ್ಗಾದ ಪೂಜಾವರ್ ಫರ್ವೇಜ್ ಇಲ್ಲಿ ಬಂದು ನೋಡಿ ಎಷ್ಟು ಜನ ಹಿಂದೂ – ಮುಸ್ಲಿಂ ಒಟ್ಟಿಗೆ ನಿಂತು ಈ ಆಚರಣೆ ಮಾಡ್ತೀವಿ ಎಂದು ಎರಡೂ ಕೋಮುಗಳ ಭ್ರಾತೃತ್ವವನ್ನು ಪ್ರದರ್ಶಸಿದರು.






