ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ವೇಳೆ ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಮೂರು ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆಯಿಂದ ಬಿ.ಸಿ. ರೋಡ್‌ ತನಕ ಚತುಷ್ಪಥ ರಸ್ತೆ ನಿರ್ಮಾಣ ವಾಗುತ್ತಿದ್ದು, ನೆಲ್ಯಾಡಿ ಪೇಟೆಯಲ್ಲಿ ಎರಡೂ ಬದಿ ಸರ್ವೀಸ್‌ ರಸ್ತೆಯ ಪಕ್ಕ ತಡೆಗೋಡೆ ನಿರ್ಮಿಸಿ ಎತ್ತರಿಸಿದ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ಪೇಟೆ ಇಬ್ಭಾಗವಾಗಲಿದ್ದು, ವರ್ತಕರಿಗೆ, ಜನರಿಗೆ ತೊಂದರೆಯಾಗಲಿದೆ. ಆದ್ದ ರಿಂದ ನೆಲ್ಯಾಡಿ ಪೇಟೆಯಲ್ಲಿ ಕಲ್ಲಡ್ಕ ಮಾದರಿಯಲ್ಲೇ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಈ ಮಧ್ಯೆ ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆ ಹೆದ್ದಾರಿ ನಿರ್ಮಾಣಕ್ಕಾಗಿ ಸಂಸದರ ಸಹಿತ ರಾಜ್ಯ, ಕೇಂದ್ರ ಸರಕಾರಗಳಿಗೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಎ. 15ರಂದು ಮಧ್ಯಾ ಹ್ನದ ತನಕ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸಿದ್ದರು.

ಈ ಹಿನ್ನೆಲೆಯಲ್ಲಿ ಎ. 15 ರ ರಾತ್ರಿ ನೆಲ್ಯಾಡಿಗೆ ಆಗಮಿಸಿದ ಸಂಸದರು, ಸಮಿತಿಯವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಪೇಟೆಯಲ್ಲಿ ಈಗಾಗಲೇ ಎರಡು ಅಂಡರ್‌ಪಾಸ್‌ ಮಾಡಲಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯೂ ಅರ್ಧದಷ್ಟು ಮುಗಿದಿದೆ. ಪೇಟೆಯಲ್ಲಿ ಹೆಚ್ಚುವರಿಯಾಗಿ ಮತ್ತೆ ಮೂರು ಅಂಡರ್‌ಪಾಸ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಶೀಘ್ರವೇ ಕಾಮಗಾರಿ ನಡೆಸುವುದಾಗಿಯೂ ಹೇಳಿದರು ಎಂದು ವರದಿಯಾಗಿದೆ.

ಸಭೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್‌, ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್‌ ಕೆ.ಎಸ್‌.ದುರ್ಗಾಶ್ರೀ, ಎರಡೂ ಸಂಘಟನೆಯ ಪದಾಧಿಕಾರಿಗಳು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಭಾಸ್ಕರ ಎಸ್‌.ಗೌಡ ಇಚ್ಲಂಪಾಡಿ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್‌, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.

ಅಂಗಡಿ-ಮುಂಗಟ್ಟು ಬಂದ್‌;
ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆ ಹೆದ್ದಾರಿ ನಿರ್ಮಾಣಕ್ಕೆ ಒತ್ತಾಯಿಸಿ ನೆಲ್ಯಾಡಿ ಪೇಟೆಯ ವರ್ತಕರು ಎ.15ರಂದು ಮಧ್ಯಾಹ್ನದ ತನಕ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!