
ಮಂಗಳೂರಿನಲ್ಲಿ(Mangaluru) ಕೋಮು ಸಂಘರ್ಷವನ್ನು ತಡೆಗಟ್ಟಲು ಹೊಸ ತಂಡವೊಂದು ರೆಡಿಯಾಗಿದೆ. ‘ಸ್ಪೆಷಲ್ ಆಯಕ್ಷನ್ ಫೋರ್ಸ್’ (Special Action Force)ಇಂದು ಅಸ್ತಿತ್ವಕ್ಕೆ ಬಂದಿದೆ. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೂತನ ಸ್ಟ್ರೈಕಿಂಗ್ ಫೋರ್ಸ್ಗೆ ಚಾಲನೆ ನೀಡಿದರು.
ಹಾಗಾದರೆ ಈ ಸ್ಪೆಷಲ್ ಆಯಕ್ಷನ್ ಫೋರ್ಸ್ ಹೇಗಿರುತ್ತೆ, ಇದರ ಕಾರ್ಯ ಚಟುವಟಿಕೆಗಳೇನು ಎಂದು ತಿಳಿಯಿರಿ.
ಕೋಮುದಳ್ಳುರಿಗೆ ಸಿಲುಕಿದ್ದ ಮಂಗಳೂರಿಗೆ ನೂತನ ಪೊಲೀಸ್ ಪಡೆಯ ಆಗಮನವಾಗಿದೆ. ರಾಜ್ಯ ಸರ್ಕಾರ ಕೊನೆಗೂ ಕೊಟ್ಟ ಮಾತಿನಂತೆ ಕೋಮು ಸಂಘರ್ಷದ ನೆಲದಲ್ಲಿ ಹೊಸ ತಂಡವನ್ನು ಹುಟ್ಟುಹಾಕಿದೆ. ಸ್ಪೆಷಲ್ ಆಕ್ಷನ್ ಫೋರ್ಸ್ ಎಂಬ ಪೊಲೀಸ್ ಪಡೆ ಮಂಗಳೂರಿನಲ್ಲಿ ಇಂದಿನಿಂದ ಅಸ್ತಿತ್ವಕ್ಕೆ ಬರಲಿದ್ದು, ಕಿಡಿಗೇಡಿಗಳ ಹುಟ್ಟಡಗಲಿಸಿದೆ.
248 ಸಿಬ್ಬಂದಿ, 3 ಕಂಪನಿ ಕಾರ್ಯಾಚರಣೆಗೆ ಸಿದ್ಧ
ಕೋಮು ಸಂಘರ್ಷ ನಿಗ್ರಹಕ್ಕೆ ಮಾಡಿರುವ ಸ್ಪೆಷಲ್ ಆಕ್ಷನ್ ಫೋರ್ಸ್‌ಗೆ ಈಗಾಗಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್ ಚಾಲನೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಫೋರ್ಸ್ ಕಾರ್ಯಾಚರಣೆ ಮಾಡಲಿದೆ. ಡಿಐಜಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದ್ದು, 248 ಸಿಬ್ಬಂದಿ ಒಳಗೊಂಡ ಮೂರು ಕಂಪನಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ಪ್ರತಿ ಕಂಪನಿಯಲ್ಲಿ 80 ಸಿಬ್ಬಂದಿ ಇರಲಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹೆಗಲಿಗೆ ಈ ವಿಶೇಷ ಕಾರ್ಯ ಪಡೆಯ ಹೆಚ್ಚುವರಿ ಹೊಣೆ ಇರಲಿದೆ. ಮಂಗಳೂರು ನಗರ ಕೇಂದ್ರದಲ್ಲಿಯೇ ಎಸ್‌ಎಎಫ್ ಕಾರ್ಯಪಡೆಯ ಕೇಂದ್ರ ಕಚೇರಿ ಇರಲಿದೆ. ನಕ್ಸಲ್ ನಿಗ್ರಹ ಪಡೆಯಲ್ಲಿದ್ದ 656 ಸಿಬ್ಬಂದಿಗಳ ಪೈಕಿ 248 ಮಂದಿ ಈ ಹೊಸ ಪಡೆಗೆ ನಿಯೋಜನೆ ಮಾಡಲಾಗಿದೆ.
ಕೋಮು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ
ಡಿಐಜಿ, ಡಿವೈಎಸ್ಪಿ, ಸಹಾಯಕ ಕಮಾಂಡೆಂಟ್, 4 ಇನ್ ಸ್ಪೆಕ್ಟರ್, 16 ಪಿಎಸ್‌ಐ ಸೇರಿದಂತೆ ಒಟ್ಟು 248 ಸಿಬ್ಬಂದಿ ತಂಡದಲ್ಲಿದ್ದಾರೆ. ಈ ತಂಡ ಸಂಭಾವ್ಯ ಕೋಮು ಹಿಂಸಾಚಾರ, ಕೋಮು ಗಲಭೆಯ ಸಂಚು, ಮೂಲಭೂತವಾದಿ ಚಟುವಟಿಕೆ ನಿಗ್ರಹ ಸೇರಿದಂತೆ ಗುಪ್ತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಿದೆ. ಆ ಮೂಲಕ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಚಟುವಟುಕೆಗಳ ಮೇಲೂ SAF ತೀವ್ರ ನಿಗಾ ಇಡಲಿದೆ.
ಕಳೆದೊಂದು ತಿಂಗಳಿಂದ ಕೋಮು ಗಲಾಟೆ, ದ್ವೇಷದ ಕೊಲೆಗಳನ್ನು ಕಂಡ ಮಂಗಳೂರಿಗೆ ಈ ಆಕ್ಷನ್ ಫೋರ್ಸ್ ಕೊಂಚ ನಿರಾಳವನ್ನು ತಂದಿದೆ. ನಗರದ ಹಲವು ಠಾಣೆಗಳಿಗೆ ಖಡಕ್ ಇನ್ಸ್ಪೆಪೆಕ್ಟರ್ಗಳನ್ನು ನಿಯೋಜಿಸುವ ಪ್ರಕ್ರಿಯೆಯೂ ಜಾರಿಯಲ್ಲಿದೆ. ಕೋಮು ದ್ವೇಷ, ಗಲಭೆಗಳಲ್ಲಿ ಭಾಗವಹಿಸಿದರೆ ಮುಲಾಜಿಲ್ಲದೇ ಹೆಡೆಮುರಿ ಕಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ರಫ್&ಟಫ್ ನಡೆ ಕಿಡಿಗೇಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಒಟ್ಟಿನಲ್ಲಿ ಸರಣಿ ಕೊಲೆಗಳಿಗೆ ಪತರುಗುಟ್ಟಿದ್ದ ಮಂಗಳೂರಿಗೆ ಭರವಸೆಯ ನೂತನ ಆಕ್ಷನ್ ಫೋರ್ಸ್ ಅಸ್ತಿತ್ವಕ್ಕೆ ಬಂದಿದೆ. ಈ ಫೋರ್ಸ್ ನಿಂದ ಕೋಮು ದ್ವೇಷದ ಸದ್ದಡಗಲಿ, ಶಾಂತಿ ಸೌಹಾರ್ದತೆ ಕರಾವಳಿಯಲ್ಲಿ ನೆಲೆಸಲಿ ಅನ್ನೋದು ಸರ್ವ ಜನರ ಆಶಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಇದ್ರೆ ರಾಜ್ಯದಲ್ಲಿ ಶಾಂತಿ ಇರುತ್ತೆ: ಡಾ.ಪರಮೇಶ್ವರ್
SAF ಉದ್ಘಾಟಿಸಿದ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಪರಮೇಶ್ವರ್, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಎಸ್ಎಎಫ್ ಅಗತ್ಯವಿದೆ. ಈ ಕಾರ್ಯಪಡೆಗೆ ಅನೇಕರು ಟೀಕೆ ಮಾಡಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಇದ್ರೆ ರಾಜ್ಯದಲ್ಲಿ ಶಾಂತಿ ಇರುತ್ತೆ. ಈ ಕಾರ್ಯಪಡೆ ಕೆಲಸಕ್ಕೆ ಜಿಲ್ಲೆಯ ಜನರು ಸಹಕಾರ ನೀಡಬೇಕು. ಯಾರೂ ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಇದನ್ನೇ ದೊಡ್ಡದು ಮಾಡಿ ವಿಭಜನೆ ಮಾಡುವುದು ಸರಿಯಲ್ಲ. ಅಗತ್ಯವಿದ್ದರೆ ಇಡೀ ರಾಜ್ಯದಲ್ಲಿ ಈ ಕಾರ್ಯಪಡೆ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದ್ದಾರೆ.









