




ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ಬೇಷರತ್ತಾಗಿ ಶರಣಾಗುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಗೂ ಡೊಂಟ್ ಕೇರ್ ಎಂದ ಅಯತೊಲ್ಲಾ ಅಲಿ ಖಮೇನಿ ಇರಾನ್ ಶರಣಾಗುವುದಿಲ್ಲ ಎಂದು ಗುಡುಗಿದ್ದಾರೆ.
ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಮೇನಿ, ಇರಾನ್ ಶರಣಾಗುವ ರಾಷ್ಟ್ರವಲ್ಲ.ಅಲ್ಲದೇ ಯಾವುದೇ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಹಾನಿಗೆ ಕಾರಣವಾಗುತ್ತದೆ ಎಂಬುದನ್ನು ಅಮೆರಿಕನ್ನರು ತಿಳಿದಿರಬೇಕು ಎಂದರು.
ಇರಾನ್ ರಾಷ್ಟ್ರವನ್ನು ಚೆನ್ನಾಗಿ ಬಲ್ಲವರೂ, ಅದರ ಇತಿಹಾಸದ ಬಗ್ಗೆ ತಿಳಿದಿರುವವರು ಎಂದಿಗೂ ಈ ರಾಷ್ಟ್ರದೊಂದಿಗೆ ಬೆದರಿಕೆಯ ಭಾಷೆಯಲ್ಲಿ ಮಾತನಾಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಫೋಸ್ಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಮತ್ತು ಇಸ್ರೇಲ್ ಗೆ ಖಮೀನಿ ಸುಲಭವಾದ ಗುರಿ ಎಂದು ಹೇಳಿದ ನಂತರ, ಇರಾನ್ ಬೇಷರತ್ತಾಗಿ ಶರಣಾಗುವಂತೆ ಸೂಚಿಸಿದ್ದರು.


