
ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ಪ್ರವಾಸ ಕೈಗೊಳ್ಳಬೇಡಿ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ. ಪ್ರವಾಸಿಗರಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿರುವ ಅಮೆರಿಕವು ಈ ಅಂಶಗಳನ್ನು ಉಲ್ಲೇಖಿಸಿದೆ.
ಅಲ್ಲದೆ ಪ್ರವಾಸದ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಭಾರತದಲ್ಲಿ ಅತ್ಯಾಚಾರ, ಅಪರಾಧ ಪ್ರಕರಣ ಮತ್ತು ಉಗ್ರವಾದ ಹೆಚ್ಚಾಗುತ್ತಿದೆ. ಇದರಲ್ಲಿ ಅತ್ಯಾಚಾರ ಪ್ರಕರಣಗಳ ಪ್ರಮಾಣ ಹೆಚ್ಚಿದೆ. ಲೈಂಗಿಕ ದೌರ್ಜನ್ಯ ಸಹಿತ ಅಪರಾಧಗಳ ಸಂಖ್ಯೆ ಅಧಿಕವಾಗುತ್ತಿದೆ. ಪ್ರವಾಸಿ ತಾಣಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್, ಸರಕಾರಿ ಕೇಂದ್ರಗಳ ಮೇಲೆ ಉಗ್ರ ದಾಳಿಯಾಗುವ ಸಂಭವವಿದೆ ಎಂದು ಹೇಳಿದೆ.
ಸೂಚನೆಗಳೇನು?
ಭಾರತಕ್ಕೆ ಪ್ರವಾಸ ಕೈಗೊಳ್ಳುವ ಅಮೆರಿಕನ್ನರು ಭದ್ರತೆಯ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಅಮೆರಿಕ ಸೂಚಿಸಿರುವ ಪ್ರದೇಶಗಳಿಗೆ ಯಾವುದೇ ಕಾರಣಕ್ಕೂ ಪ್ರವಾಸ ಕೈಗೊಳ್ಳಬಾರದು. ಅಮೆರಿಕ ನೀಡಿರುವ ಕಾನೂನು ಸೂಚನೆಗಳನ್ನು ತಪ್ಪದೆ ಪಾಲಿಸಬೇಕು ಎಂಬ ಸೂಚನೆಗಳನ್ನು ಪ್ರವಾಸಿಗರಿಗೆ ನೀಡಿದೆ.
ಹಿಂಸಾತ್ಮಕ ಅಪರಾಧ ಹೆಚ್ಚಳ
ಭಾರತದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಉಗ್ರವಾದದಂತಹ ಹಿಂಸಾತ್ಮಕ ಅಪರಾಧಗಳು ಹೆಚ್ಚಳವಾಗುತ್ತಿವೆ. ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಹೀಗಾಗಿ ಪ್ರಯಾಣದ ಸಮಯದಲ್ಲಿ ಭಾರತದ ಕಾನೂನುಗಳನ್ನು ಅಮೆರಿಕನ್ನರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಉಪಗ್ರಹ ಫೋನ್‌ಗಳನ್ನು ಕೊಂಡೊಯ್ಯಬಾರದು. ತುರ್ತು ಬೆಂಬಲ ನೀಡುವ ಅಮೆರಿಕದ ಸಾಮರ್ಥ್ಯ ಸೀಮಿತವಾಗಿದೆ. ಹೀಗಾಗಿ ಅಪಾಯದ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.





