
ಮಂಗಳೂರು, ಜು.21 – ಧರ್ಮಸ್ಥಳದಲ್ಲಿ ನಡೆದಿದ್ದೆಂದು ಆರೋಪಿಸಲಾಗಿರುವ ಕೊಲೆ ಪ್ರಕರಣದ ಕುರಿತು ವ್ಯಕ್ತಿಯೊಬ್ಬರಿಂದ ದಾಖಲಾಗಿರುವ ಸಾಕ್ಷಿ ದೂರಿನ ತನಿಖೆ ಹಿನ್ನೆಲೆಯಲ್ಲಿ ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರುವ ರೀತಿಯ ಚರ್ಚೆ ಅಥವಾ ತೀರ್ಮಾನಗಳು ನಡೆಯಬಾರದು ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವ್ಯಕ್ತಿಯೊಬ್ಬರ ಹೇಳಿಕೆಯ ಆಧಾರದಲ್ಲಿ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ (SIT) ರಚಿಸಿದೆ. ತನಿಖೆ ಪ್ರಾಮಾಣಿಕವಾಗಿ ನಡೆಯಬೇಕು, ಸತ್ಯತೆ ಬಯಲಾಗಬೇಕು ಹಾಗೂ ಸತ್ಯದ ಆಧಾರದ ಮೇಲೆ ಕಾನೂನು ಕ್ರಮ ಜರುಗಬೇಕು. ಆದರೆ ತನಿಖೆಗೆ ಮುನ್ನವೇ ಯಾವುದೇ ಪೂರ್ವಗ್ರಹದಿಂದ ತೀರ್ಮಾನಿಸುವುದು ಸರಿಯಲ್ಲ” ಎಂದು ಖಾದರ್ ಅಭಿಪ್ರಾಯಪಟ್ಟರು.
ಅವರು ಮುಂದುವರೆದು, “ಧರ್ಮಸ್ಥಳವು ಧಾರ್ಮಿಕ ನಂಬಿಕೆಯ ಪವಿತ್ರ ಕ್ಷೇತ್ರವಾಗಿದೆ. ಈ ಹಿನ್ನೆಲೆ ಯಾರು ಮಾತಾಡುತ್ತಿದ್ದರೂ ಜವಾಬ್ದಾರಿಯುತವಾಗಿ ಮಾತನಾಡಬೇಕು. ಆತ್ಮಾವಲೋಕನ ಅಗತ್ಯವಾಗಿದೆ” ಎಂದು ತಿಳಿಸಿದ್ದಾರೆ.






