
ಕಡಬ: ಬಲ್ಪ, ಎಡಮಂಗಲ, ಸುಬ್ರಮಣ್ಯ ಕೃಷಿ ಸಖಿಯರ ಮುತುವರ್ಜಿಯಿಂದ ಕಡಬ ತಾಲೂಕಿನ ಬಲ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀದಿಗುಡ್ಡೆ ಕಾಂಜಿ ಎಂಬಲ್ಲಿ ಇಂದು “ಕೆಸರ್ಡ್ ಒಂಜಿ ದಿನ ನೇಜಿ ನಾಟಿ” ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಡಿಲು ಬಿದ್ದ ಕೃಷಿ ಭೂಮಿಯನ್ನು ಪುನಃ ಫಲವತ್ತತೆಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯದಲ್ಲಿ ತಾಲ್ಲೂಕಿನ ಕೃಷಿ ಸಖಿಯರು, ಪಶು ಸಖಿಯರು, ಸ್ಥಳೀಯ ಮನೆ ಸದಸ್ಯರು, ಒಕ್ಕೂಟಗಳ ಅಧ್ಯಕ್ಷರು ಹಾಗೂ ಸ್ವ ಸಹಾಯ ಗುಂಪುಗಳ ಸದಸ್ಯರು ಭಾಗಿ ಹೊಂದಿದ್ದರು. ಪಂಜ ಹೊಬಳಿ ಕೃಷಿ ಇಲಾಖೆ ಕೇಂದ್ರ, ಕಡಬ ತಾಲೂಕು ಪಂಚಾಯತ್ ಹಾಗೂ ಡೇ ಎನ್ ಆರ್ ಎಲ್ ಎಮ್ ಯೋಜನೆಯ ಸಹಯೋಗದಲ್ಲಿ 1.5 ಎಕರೆ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯ ಯಶಸ್ವಿಯಾಗಿ ನಡೆಯಿತು.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ನವೀನ್ ಕುಮಾರ್ ಭಂಡಾರಿ ಎಚ್ ಅವರು ಸ್ವತಃ ಗದ್ದೆಗೆ ಇಳಿದು ನೇಜಿ ನಾಟಿಯಲ್ಲಿ ಪಾಲ್ಗೊಂಡು, ಭತ್ತದ ಉತ್ಪಾದನೆಯ ಅವಶ್ಯಕತೆ ಹಾಗೂ ಮಕ್ಕಳ ಆಹಾರ ಭದ್ರತೆ ಕುರಿತು ಸಮೂಹಕ್ಕೆ ಬೋಧನಾತ್ಮಕ ಸಂದೇಶ ನೀಡಿದರು. ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಅವರು ತಿಳಿಸಿದರು.
ಪುತ್ತೂರು ವಿಭಾಗ ಕೃಷಿ ಇಲಾಖೆಯ ಉಪ ನಿರ್ದೇಶಕ ಶ್ರೀ ಶಿವಶಂಕರ್ ಅವರು ರೈತರ ಪಾಠ ಶಾಲೆಗಳ ಮೂಲಕ ತಾಂತ್ರಿಕ ಮಾಹಿತಿ ನೀಡುವ ಪ್ರಸ್ತಾವನೆ ವಹಿಸಿ, ಭತ್ತದ ಬೇಸಾಯಕ್ಕೆ ಬೇಕಾದ ಎಲ್ಲ ತಾಂತ್ರಿಕ ಬೆಂಬಲವನ್ನು ನಿಶ್ಚಯಿಸಿದರು.
ಕಾರ್ಯಕ್ರಮದಲ್ಲಿ ಬಲ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಹರ್ಷಿತ್ ಕಾರ್ಜ, ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಗೌಡ ಜಾಲ್ತರ್, ಡೇ ಎನ್ ಆರ್ ಎಲ್ ಎಮ್ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶ್ರೀ ಜಗತ್ ಕೆ, ಕೃಷಿ ಚಟುವಟಿಕೆ ಬ್ಲಾಕ್ ಮ್ಯಾನೇಜರ್ ಮೋಹನ್, ತಾ. ಸಂಪನ್ಮೂಲ ವ್ಯಕ್ತಿಗಳು ಧನ್ಯಶ್ರೀ, ರಮ್ಯ, ಆತ್ಮ ಬ್ಲಾಕ್ ತಾಂತ್ರಿಕ ವ್ಯವಸ್ಥಾಪಕಿ ಸೀಮಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ನಾರಾಯಣ, ಹಾಗೂ ಪಂಚಾಯತ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಜಮೀನಿನ ಮಾಲೀಕರಾದ ಮಣಿಯಾಣಿ, ಆದರ್ಶ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಮುಖ್ಯ ಪುಸ್ತಕ ಬರಹಗಾರ್ತಿ ಶ್ರೀಮತಿ ಯಮುನಾ, ಸಮುದಾಯ ಸಂಪನ್ಮೂಲ ವ್ಯಕ್ತಿ ಕೃಷಿ ಸಖಿ ಶ್ರೀಮತಿ ಹೇಮಾ, ಪಶು ಸಖಿ ಚಿತ್ರಾವತಿ ಪ್ರಮುಖವಾಗಿ ಸಹಕರಿಸಿದರು.






