
ಸುಳ್ಯ, ಜು.25: ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಸಮೀಪದ ಕೊಯನಾಡಿನಲ್ಲಿ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಮೃತಪಟ್ಟಿದ್ದಾರೆ. ಘಟನೆ ಜುಲೈ 25ರ ಶುಕ್ರವಾರ ಸಂಭವಿಸಿದೆ.
ಕಾರಿನಲ್ಲಿದ್ದ ನಿಹಾದ್, ರಿಝಾನ್, ರಾಖಿಬ್ ಮತ್ತು ರಿಶು ಎಂಬವರು ಮೃತಪಟ್ಟಿದ್ದಾರೆ.. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಗೊಣಿಕೊಪ್ಪ ಮತ್ತು ಹುಣಸೂರಿನ ನಾಲ್ವರು ಯುವಕರು ದ.ಕ. ಜಿಲ್ಲೆಯ ಉಳ್ಳಾಲಕ್ಕೆ ಗುರುವಾರ ಕಾರಿನಲ್ಲಿ ತೆರಳಿದ್ದವರು ಅಲ್ಲಿಂದ ಇಂದು ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಕಾರಿಗೆ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ
ಮೃತದೇಹಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು, ಪೊಲೀಸ್ ಇಲಾಖೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣವನ್ನು ಕೊಡಗು ಪೊಲೀಸರು ತನಿಖೆ ಕೈಗೊಂಡಿದ್ದಾರೆ.






