
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಕಪೋಲಕಲ್ಪಿತ ಘಟನೆಗಳನ್ನು ಸೃಷ್ಟಿಸಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸಿ, ಈ ದುಷ್ಪ್ರಚಾರದ ವಿರುದ್ಧ ಜನಾಗ್ರಹ ಸಮಾವೇಶ ನಡೆಸಲು ಪುತ್ತೂರಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಕುರಿತು ಆಗಸ್ಟ್ 24ರಂದು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರದಲ್ಲಿ ನಡೆದ ಭಕ್ತರ ತುರ್ತು ಸಭೆಯಲ್ಲಿ ಚರ್ಚೆ ನಡೆಯಿತು. ಸಮಾವೇಶದ ಉಸ್ತುವಾರಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸೆಪ್ಟೆಂಬರ್ 1ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಚಪ್ಪರದಲ್ಲಿ ಸಮಾವೇಶ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಧರ್ಮಕ್ಕೆ ಬಂದ ಚ್ಯುತಿಯನ್ನು ಹೋಗಲಾಡಿಸಬೇಕು: ಶಶಿಕುಮಾರ್ ರೈ
ಸಭೆಯನ್ನುದ್ದೇಶಿಸಿ ಮಾತನಾಡಿದ ಶಶಿಕುಮಾರ್ ರೈ ಬಾಳ್ಯೊಟ್ಟು ಅವರು, “ಕೊನೆಯ ಕೆಲವು ವರ್ಷಗಳಿಂದ ಧರ್ಮಸ್ಥಳ ಕ್ಷೇತ್ರದ ಮೇಲೆ ಅಸತ್ಯ ಹಾಗೂ ಅಪಪ್ರಚಾರ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಪೂಜ್ಯ ಕಾವಂದರಿಗೆ ಬಲ ನೀಡುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಜನಾಗ್ರಹ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇಂದು ಕೇವಲ ಕರೆ ಕೊಟ್ಟಿದ್ದರಿಂದಲೇ 350 ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ಸಮಾವೇಶಕ್ಕೆ ಸಹಸ್ರ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂಬ ವಿಶ್ವಾಸವಿದೆ” ಎಂದರು.
“ನಾವು ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು” : ನಳಿನ್ ಕುಮಾರ್ ಕಟೀಲ್
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು, “ಇಂದು ಸುಳ್ಳಿನ ಮೆರವಣಿಗೆ ಹೆಚ್ಚಾಗಿದೆ. ಆದರೆ ಸತ್ಯ ಯಾವಾಗಲೂ ಜಯಿಸುತ್ತದೆ. ಧರ್ಮಸ್ಥಳ ಕ್ಷೇತ್ರವು ಶಿಕ್ಷಣ, ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರ್ಕಾರದಿಗಿಂತ ಹೆಚ್ಚು ಸಮಾಜಮುಖಿ ಕೆಲಸಗಳನ್ನು ಮಾಡಿದೆ. ಆದರೂ ಸುಳ್ಳುಪ್ರಚಾರ ನಡೆಯುತ್ತಿದೆ. ಇದು ಕೇವಲ ಧರ್ಮಸ್ಥಳದ ವಿಚಾರವಲ್ಲ, ನಾಳೆ ಪ್ರತಿಯೊಂದು ಧಾರ್ಮಿಕ ಕ್ಷೇತ್ರಕ್ಕೂ ತಟ್ಟಬಹುದು. ನಾವು ಸತ್ಯವನ್ನು ಜನರಿಗೆ ತಲುಪಿಸಬೇಕಿದೆ” ಎಂದರು.
ಹಿಂದು ಧರ್ಮಕ್ಕೆ ವಿರುದ್ಧದ ಸಂಚು:
ಸಭೆಯಲ್ಲಿ ಕೇಶವ ಪ್ರಸಾದ್ ಮುಳಿಯ, ಸಂಜೀವ ಮಠಂದೂರು, ಕೆ. ಸೀತಾರಾಮ ರೈ, ಅರುಣ್ ಕುಮಾರ್ ಪುತ್ತಿಲ, ಪದ್ಮನಾಭ ಶೆಟ್ಟಿ, ಈಶ್ವರ ಭಟ್ ಪಂಜಿಗುಡ್ಡೆ, ನನ್ಯ ಅಚ್ಚುತ ಮೂಡೆತ್ತಾಯ, ಮುರಳಿಕೃಷ್ಣ ಹಸಂತಡ್ಕ, ಧನ್ಯಕುಮಾರ್ ಜೈನ್, ಚಿದಾನಂದ ಬೈಲಾಡಿ ಸೇರಿದಂತೆ ಹಲವಾರು ಗಣ್ಯರು ಮಾತನಾಡಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ದ್ರೋಹವನ್ನು ಪ್ರತಿರೋಧಿಸುವ ಜವಾಬ್ದಾರಿ ಇಡೀ ಹಿಂದು ಸಮಾಜದ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಧರ್ಮಸ್ಥಳಕ್ಕೆ ವಾಹನ ಜಾಥಾ
ಅವಿಭಜಿತ ದ.ಕ. ಜಿಲ್ಲೆಯಿಂದ ಆಗಸ್ಟ್ 25ರಂದು ಮಧ್ಯಾಹ್ನ 2 ಗಂಟೆಗೆ ಪುತ್ತೂರು ನೆಲ್ಲಿಕಟ್ಟೆ ಬಳಿಯಿಂದ 500ಕ್ಕೂ ಹೆಚ್ಚು ವಾಹನಗಳ ಜಾಥಾ ಧರ್ಮಸ್ಥಳದತ್ತ ಹೊರಡಲಿದೆ. ಸಂಜೆ 5 ಗಂಟೆಗೆ ಪೂಜ್ಯ ಕಾವಂದರನ್ನು ಭೇಟಿ ಮಾಡಿ ಸಭೆ ನಡೆಯಲಿದೆ.
— ಶಶಿಕುಮಾರ್ ರೈ ಬಾಳ್ಯೊಟ್ಟು
ಸಮಾವೇಶದಲ್ಲಿ 17 ಅಜೆಂಡಾ…
ಡಾ. ಮೋಹನ್ ಅಳ್ವ ಅವರ ಮಾರ್ಗದರ್ಶನದಲ್ಲಿ 17 ಅಜೆಂಡಾಗಳನ್ನು ಸಿದ್ಧಪಡಿಸಲಾಗಿದೆ. ಅದರಂತೆ ಸಮಾವೇಶದಲ್ಲಿ:
ಸಮಾನಮನಸ್ಕರ ಪಾಲ್ಗೊಳ್ಳಿಕೆ,
ರಾಜಕೀಯ–ಜಾತಿ–ಸಮುದಾಯದ ಪ್ರಭಾವವಿಲ್ಲದೆ ಸಮತೋಲಿತ ಸಮಾವೇಶ,
ಸ್ವಾಮೀಜಿ, ವಿದ್ವಾಂಸರು, ಗಣ್ಯರ ಸಮಾವೇಶ,
ಕಾವಂದರ ಸಾಧನೆ ಕುರಿತು ಉಪನ್ಯಾಸ, ದಿಕ್ಸೂಚಿ ಭಾಷಣ,
ಸಾಮಾಜಿಕ ಜಾಲತಾಣದ ಅಸತ್ಯ ಪ್ರಚಾರಕ್ಕೆ ಕಡಿವಾಣ,
ಎಲ್ಲಾ ತಾಲೂಕು ಸಮಾವೇಶಗಳ ವರದಿಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಕೆ,
12 ಸಾವಿರ ಜನರ ಭಾಗವಹಿಸುವ ನಿರೀಕ್ಷೆ,
9 ವಲಯಗಳಾಗಿ ಸಂಘಟನಾ ಕಾರ್ಯ ವಿಂಗಡಣೆ,
ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ದಿಕ್ಸೂಚಿ ಭಾಷಣ.
ಸೆಪ್ಟೆಂಬರ್ 1ರಂದು ಬೆಳಿಗ್ಗೆ 9ಕ್ಕೆ ಸಭಿಕರು ಸೇರುವಂತೆ ಕರೆ ನೀಡಲಾಗಿದೆ.
ಸಭೆಯಲ್ಲಿ ಭಾಗವಹಿಸಿದವರು ಶಶಿಕುಮಾರ್ ರೈ, ಸಾಜ ರಾಧಾಕೃಷ್ಣ ಆಳ್ವ, ಪದ್ಮನಾಭ ಶೆಟ್ಟಿ, ಮಹಾಬಲ ರೈ ವಳತ್ತಡ್ಕ, ಲೊಕೇಶ್ ಹೆಗ್ಡೆ, ವಿನಯ ಸುವರ್ಣ, ಎಸ್.ಬಿ ಜಯರಾಮ ರೈ, ರಾಧಾಕೃಷ್ಣ ಬೋರ್ಕರ್, ದಯಾನಂದ ಶೆಟ್ಟಿ ಉಜಿರೆಮಾರು, ಪ್ರಸನ್ನ ಕುಮಾರ್ ಮಾರ್ತ, ರಾಜೇಶ್ ಬನ್ನೂರು, ಎ.ಕೆ. ಜಯರಾಮ ರೈ, ಸುದೇಶ್ ಶೆಟ್ಟಿ, ಅಶ್ವಿನ್ ರೈ, ರವೀಂದ್ರನಾಥ ರೈ, ಯು.ಪೂವಪ್ಪ, ಜೀವಂಧರ್ ಜೈನ್, ಚಂದ್ರಹಾಸ ಶೆಟ್ಟಿ, ಅಜಿತ್ ಪ್ರಸಾದ್ ರೈ, ಸದಾಶಿವ ರೈ, ವಿಶ್ವೇಶ್ವರ ಭಟ್, ಸತೀಶ್ ನಾಯಕ್, ಶ್ರೀಕೃಷ್ಣ ಬೋಳಿಲ್ಲಾಯ, ಪ್ರಕಾಶ್ಚಂದ್ರ ರೈ, ರಾಜೇಶ್ ರೈ, ಜಗನ್ನಾಥ ರೈ, ತ್ರಿವೇಣಿ ಪಲ್ಲತ್ತಾರು, ಸತೀಶ್ ಗೌಡ, ಮಮತಾ ರೈ, ಚಂದ್ರಶೇಖರ ರಾವ್, ಆರ್.ಸಿ. ನಾರಾಯಣ, ಯುವರಾಜ್ ಪೆರಿಯತ್ತೊಡಿ, ಹರಿಪ್ರಸಾದ್, ಡಾ. ಅಶೋಕ್ ಪಡಿವಾಳ್, ದೀಕ್ಷಾ ಪೈ, ಪೂರ್ಣಿಮಾ, ರಾಮಣ್ಣ ಗೌಡ ಗುಂಡೋಲೆ ಹಾಗೂ ಇನ್ನೂರಾರು ಭಕ್ತರು ಉಪಸ್ಥಿತರಿದ್ದರು.






