
ಧರ್ಮಸ್ಥಳದಲ್ಲಿ (Dharmasthala Case) ನೂರಾರು ಕೊಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarody) ಮನೆಯ ಮೇಲೆ ಎಸ್‌ಐಟಿ (SIT) ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಸಚಿವ ಜಿ ಪರಮೇಶ್ವರ್ (G. Parameshwar) ಪ್ರತಿಕ್ರಿಯಿಸಿದ್ದು, ಎಸ್‌ಐಟಿ ಅಧಿಕಾರಿಗಳು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಎಸ್ ಐಟಿ ಅಧಿಕಾರಿಗಳ ವಿಚಾರಣೆಯ ವೇಳೆ ಮಾಸ್ಕ್ ಮ್ಯಾನ್ ಚಿನ್ನಯ್ಯ, ಎಸ್‌ಐಟಿ ಉತ್ಕನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಮೊಬೈಲ್ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದ..
ಅದರಂತೆ ಅಧಿಕಾರಿಗಳು ಸರ್ಚ್ ವಾರೆಂಟ್ ಸಮೇತ ಚಿನ್ನಯ್ಯನೊಂದಿಗೆ ತಿಮರೋಡಿಯ ಮನೆಗೆ ಆಗಮಿಸಿ ಸ್ಥಳ ಮಹಜರು ಮಾಡಿದ್ದರು. ಇದೀಗ ಪರಿಶೀಲನೆಯ ವೇಳೆ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಸಿಸಿಟಿವಿ ಹಾರ್ಡ್ ಡಿಸ್ಕ್ ವೊಂದನ್ನು ಕೂಡ ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿ ಪರಮೇಶ್ವರ್, ಕೋಟ್ಯಂತರ ಭಕ್ತರು ನಂಬಿರುವ ಧರ್ಮಸ್ಥಳದ ಬಗ್ಗೆ ಆರೋಪಿಸಿದ ಹಿನ್ನಲೆ ಸತ್ಯಾಸತ್ಯತೆ ಆಚೆ ಬರಬೇಕೆಂದೇ ತನಿಖೆಗೆ ಎಸ್ ಐಟಿ ರಚನೆ ಮಾಡಿರುವುದು, ಈ ನಿಟ್ಟಿನಲ್ಲಿ ಎಸ್‌ಐಟಿ ಅವರ ಮೇಲೆ ಜವಾಬ್ದಾರಿ ಇದೆ. ಚಿನ್ನಯ್ಯ ಬಂಧನ ಆದ ಮೇಲೆ ಅದರ ಫಾಲೋಅಪ್ ಕೂಡ ಆಗ್ತಿದೆ.ಆದಷ್ಟು ಬೇಗ ತನಿಖೆ ನಡೆಸಿ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ಗೊತ್ತಾಗುತ್ತದೆ ಎಂದರು.
ಈಗಾಗಲೇ ತನಿಖೆ ಬೇಗ ಮುಗಿಸಲು ಎಸ್‌ಐಟಿ ಅಧಿಕಾರಿಗಳ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಸರ್ಕಾರದಿಂದ ಯಾವುದೇ ನಿರ್ದೇಶನವಾಗಲಿ ಏನು ಕೊಟ್ಟಿಲ್ಲ.. ನಾವು ಆದೇಶದಲ್ಲಿ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟಿದ್ದೇವೆ. ಎಸ್‌ಐಟಿ ಅವರದೇ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದು ಪರಂ ತಿಳಿಸಿದರು.
ಎಸ್‌ಐಟಿ ತಂಡವನ್ನು ಮಾಡುವುದಷ್ಟೇ ನಮ್ಮ ಕೆಲಸ ತನಿಖೆಯ ಬಗ್ಗೆ ನಮಗೆ ನಿರ್ದೇಶನ ನೀಡಲು ಬರುವುದಿಲ್ಲ ಯಾರ ಮೇಲೆ ರೇಡ್ ಮಾಡ್ತಾರೆ ಅದನ್ನೆಲ್ಲ ನಮಗೆ ಹೇಳಿ ಕೇಳಿ ಮಾಡೋದಿಲ್ಲ. ಅವರು ತನಿಖೆಯ ಭಾಗವಾಗಿ ಏನು ಬೇಕೋ ಅದನ್ನು ಮಾಡುತ್ತಾರೆ ಅಷ್ಟೇ ಎಂದು ಹೇಳಿದರು.
ಈ ಪ್ರಕರಣವನ್ನು ಎನ್‌ಐಎಗೆ ನೀಡುವ ಅವಶ್ಯಕತೆ ಇಲ್ಲ. ಎಸ್‌ಐಟಿ ಸಮರ್ಪಕವಾಗಿ ತನಿಖೆ ಮಾಡುತ್ತಿದ್ದಾರೆ. ಅದರಲ್ಲಿ ಲೋಪ ಇದೆ ಅಂತ ಕಂಡು ಬಂದ್ರೆ ಅದು ಬೇರೆ ವಿಚಾರ. ಅವರು ತನಿಖೆ ಮಾಡಿ ವರದಿ ಕೊಡುವ ಮುನ್ನ ತನಿಖೆ ಸರಿ ಇಲ್ಲ ಅಂತ ಹೇಳೋಕೆ ಆಗಲ್ಲ, ಮಾತನಾಡುವಾಗ ಏನಾದರೂ ಮಾನದಂಡ ಇರಬೇಕು. ಸುಖಾಸುಮ್ಮನೆ ಮಾತನಾಡುವುದು ತಪ್ಪು ಎಂದು ಪರಂ ಕಿಡಿಕಾರಿದರು.
ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ, ಸದ್ಯದಲ್ಲೇ ವರದಿ ಬರಲಿದೆ. ವರದಿ ಬಂದ ನಂತರ ಪರ ವಿರೋಧ ಚರ್ಚೆ ಆಗುತ್ತೆ . ಆನಂತರ ಸರ್ಕಾರದ ಹಂತದಲ್ಲಿ ಏನು ತೀರ್ಮಾನ ಮಾಡಬೇಕು ಮಾಡುತ್ತೇವೆ. ಯಾವ ಆಧಾರದ ಮೇಲೆ ಸರ್ಕಾರವನ್ನು ತಪ್ಪಿತಸ್ಥರು ಅಂತ ಹೇಳ್ತಾರೆ. ಎಲ್ಲಾ ರೀತಿಯ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಪರಂ ತಿಳಿಸಿದರು.






