
ಬಿಜೆಪಿ ಪಕ್ಷದಲ್ಲಿ ಮೈಸೂರಿನ ಸಂಸದ ಯದುವೀರ್ ಅಂತಹವರ ಸಂತತಿ ಹೆಚ್ಚಾಗಲಿ ಎಂದು ಅಪೇಕ್ಷೆ ಪಡುತ್ತೇನೆ . ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದೆ ಹೇಳಿಕೆ ನೀಡಬೇಕು. ಅಂತಹ ವಿದ್ಯಾವಂತ ಸುಸಂಸ್ಕೃತ ಮನಸುಗಳಿಗೆ ಮಾತ್ರ ಸಾಧ್ಯ. ಬೂಕರ್ ಅಂತಹ ಪ್ರಶಸ್ತಿ ಸಿಗೋದು ಸುಲಭದ ಮಾತಲ್ಲ. ಅದರ ಬಗ್ಗೆಯೂ ಒಂದಿಬ್ಬರು ಬಹಳ ಕೇವಲವಾಗಿ ಮಾತನಾಡುತ್ತಾರೆ. ಅದರ ಬಗ್ಗೆ ನನಗೆ ಬೇಜಾರಿಲ್ಲ. ಅವರವರ ಮಟ್ಟಕ್ಕೆ ತಕ್ಕಹಾಗೆ ಮಾತಾಡ್ತಾರೆ ಮಾತಾಡಲಿ ಎಂದು ಟಾಂಗ್ ಕೊಟ್ಟರು.
ಕನ್ನಡವನ್ನ ನನ್ನಷ್ಟು ಬಳಕೆ ಮಾಡಿ
ಕನ್ನಡ ಬಾವುಟದ ಬಗ್ಗೆ ಮಾತನಾಡಿದ ಬಾನು ಮುಷ್ತಾಕ್, ಕನ್ನಡವನ್ನು ನನ್ನಷ್ಟು ಪ್ರೀತಿಸಿ. ಕನ್ನಡವನ್ನ ನನ್ನಷ್ಟು ಬಳಕೆ ಮಾಡಿ. ಕನ್ನಡವನ್ನು ನನ್ನಷ್ಟು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ.ಅಲ್ಲಿನವರ ಬಾಯಲ್ಲಿ ಕನ್ನಡ ಎಂದು ಹೇಳಿಸುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಒಂದೊಂದು ಪುಟ ಓದುತ್ತಿದ್ದೇನೆ. ಅವರೂ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ. ನನ್ನಂತೆ ನೀವು ಸಾಧನೆ ಮಾಡಿದ್ರೆ ಟೀಕೆ ಮಾಡಲು ಅರ್ಹತೆ ಸಿಗುತ್ತೆ. ಇಲ್ಲದೆ ಹೋದರೆ ನಿಮ್ಮ ಯಾವುದೇ ಮಾತಿನಲ್ಲಿ ಸ್ಪಷ್ಟತೆ ಇರುವುದಿಲ್ಲ. ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಡಲ್ಲ, ಇದಕ್ಕೆ ನಾನೇ ಸಾಕ್ಷಿ ಎಂದು ಹೇಳುವ ಮೂಲಕ ಟೀಕಿಸಿದವರಿಗೆ ಚಾಟಿ ಬೀಸಿದರು.
ಕನ್ನಡ ಬಾವುಟದ ಬಗ್ಗೆ ಸ್ಪಷ್ಟನೆ
2023ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಆಡಿದ ಮಾತಿನ ತುಣುಕು ಹಾಕಿ ನನ್ನ ವಿರುದ್ದ ಕೆಲವರು ಆರೋಪ ಮಾಡಿದ್ದಾರೆ. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನ ದೂರ ಇಟ್ಟಿದ್ದಕ್ಕೆ ಆಯೋಜನೆಗೊಂಡಿದ್ದ ಸಮ್ಮೇಳನ ಅದು. ಅದರ ಅಧ್ಯಕ್ಷತೆ ವಹಿಸಿ ನಾನು ಮಾತಾಡಿದ್ದೇನೆ. ನನಗೆ ನೇರವಾಗಿ ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಬಗ್ಗೆ ಮುಸ್ಲಿಂ ಅಲ್ಪ ಸಂಖ್ಯಾತರು, ದಲಿತರು, ಮಹಿಳೆಯರು ದನಿಯಾಗಿ ಮಾತಾಡಿದ್ದೇನೆ. ಅದರಲ್ಲಿ ಹೇಳಿರುವ ವಿಚಾರ ಎಲ್ಲರಿಗೂ ಅರ್ಥ ಆಗಿದೆ. ಕೆಲವು ಸಂಗತಿಗಳನ್ನು ನಾನು ಹೇಳಿದ್ದೇನೆ/ ಕನ್ನಡವನ್ನು ಭಾಷೆಯಾಗಿ ಬಳಸಲು ಬದಲಾಗಿ ಭಾವುಕವಾಗಿ ಪರಿಗಣಿಸಿದ್ದೀರಿ. ದೇವತೆಯಾಗಿ ಮಾಡಿ ಮಂದಾಸನದಲ್ಲಿ ಇದ್ದಾಗ ಅದಕ್ಕೆ ಕೈಮುಗಿದು ಬಂದರೆ ಮುಗಿತು. ಭಾಷೆಯನ್ನು ಭಾಷೆಯಾಗಿ ಪರಿಗಣಿಸಿದಾಗ ನಾನು ನೀವು ಎಲ್ಲರು ಓದಬೇಕಾಗುತ್ತೆ. ಈ ರೀತಿ ಭಾಷೆಯನ್ನು ಪ್ರಶ್ನೆ ಮಾಡಬೇಡಿ. ಅದನ್ನ ನಮ್ಮ ಭಾಷೆಯನ್ನಾಗಿ ನಾವು ಬಳಸೊಣ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಮೂವರು ಮಕ್ಕಳು ಕನ್ನಡ ಶಾಲೆಯಲ್ಲಿ ಓದಿದ್ದು
ಗೋಕಾಕ್ ಸಮಿತಿ ವರದಿ ಬಂದಾಗ ಹಾಸನದಲ್ಲಿ ದೊಡ್ಡ ಕಾರ್ಯಕ್ರಮ ನಡೆದಿತ್ತು. ಸಾಮಾನ್ಯ ಮಹಿಳೆಯಾಗಿ ಹೋಗಿದ್ದ ನಾನು. ಅಲ್ಲಿ ಮಾತನಾಡಲು ಯಾರು ತಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳಿಸುತ್ತಿದ್ದೀರೊ ಅವರು ಮಾತ್ರ ಮಾತನಾಡಿ ಎಂದಿದ್ದರು.ಆಗ ಮಾತನಾಡಿದ ಏಕೈಕ ಮಹಿಳೆ ನಾನು. ವೇದಿಕೆಗೆ ಬಂದವಳು ನಾನೊಬ್ಬಳೆ. ಯಾಕೆಂದರೆ ನನ್ನ ಮೂವರು ಹೆಣ್ಣು ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಿದ್ದರು. ಹಾಗಾಗಿ ನಾನು ಅಂದಿನ ಸಭೆಯಲ್ಲಿ ಮಾತನಾಡಿದ್ದು ನಾನು ಮಾತ್ರ. ನಾನು ಹೇಳಿದ ಮಾತು ತಿರುಚುವ ಅಗತ್ಯ ಇಲ್ಲ. ಮಾತನ್ನ ಸಹೃದಯದಿಂದ ಅರ್ಥ ಮಾಡಿಕೊಳ್ಳಬೇಕು ಎಂದರು.
ಬೂಕರ್ ಬಗ್ಗೆ ಕನ್ನಡಿಗರು ಅಪಾರ ಸಂತಸ
ಬೂಕರ್ ಬಂದ ನಂತರ ಅನೇಕ ಸಾಮಾಜಿಕ ಸ್ಥಿತ್ಯಂತರ ನೋಡಿದ್ದೇನೆ. ಬೂಕರ್ ಬಗ್ಗೆ ಕನ್ನಡಿಗರು ಅಪಾರ ಸಂತಸಪಡುತ್ತಿದ್ದಾರೆ. ಅವರಿಗೆ ಪ್ರಶಸ್ತಿ ಬಂದಂತೆ ಸಂಭ್ರಮಿಸಿದ್ದಾರೆ. ಬೂಕರ್ ತಾನಾಗಿಯೇ ಒಲಿದು ಬಂದ ಪ್ರಶಸ್ತಿ. ಅದರ ನಂತರ ಕರ್ನಾಟಕ ಸರ್ಕಾರ ಹಾಗು ಜನರಿಂದ ಹಲವು ಗೌರವ ಸಿಕ್ಕಿದೆ. ಅದರ ಬಗ್ಗೆ ಅತ್ಯಂತ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ. ದಸರಾ ಉದ್ಘಾಟನೆ ಗೆ ಸರ್ಕಾರ ಪ್ರೀತಿಯಿಂದ ಗೌರವದಿಂದ ಸ್ವಾಗತ ಮಾಡಿದಾರೆ. ಅವರ ಮಮತೆಯ ಕರೆಯೋಲೆಗೆ ಧನ್ಯವಾದಗಳು, ಸಿದ್ದರಾಮಯ್ಯ ಅವರು ನನ್ನ ಹೆಸರು ಘೋಷಣೆ ಮಾಡಿದಾಗ ನಾನು ಹೊರ ದೇಶದಲ್ಲಿ ಇದ್ದೆ. ಸ್ನೇಹಿತರಿಂದ ವಿಚಾರ ತಿಳಿದು ಅಪಾರ ಸಂತೋಷವಾಗಿದೆ ಎಂದರು





