ಮೈಸೂರು ದಸರಾ (Mysuru Dasara)ಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಈ ಬಾರಿ ದಸರಾ ಉದ್ಘಾಟಕರ ಆಯ್ಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ (Banu Mushtaq) ಅವರನ್ನು ಉದ್ಘಾಟನೆಗೆ ಆಹ್ವಾನಿಸಿರುವುದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರೋಧಕ್ಕೆ ಗುರಿಯಾಗಿದೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾನು ಮುಷ್ತಾಕ್, “ಕೋಟ್ಯಾಂತರ ಕನ್ನಡಿಗರು ನನ್ನ ಮೇಲೆ ಪ್ರೀತಿ ಅಭಿಮಾನ ತೋರುತ್ತಿದ್ದಾರೆ. ಒಬ್ಬರು ಅಥವಾ ಇಬ್ಬರ ನೆಗೆಟಿವಿಟಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ವಿರೋಧ ಪಕ್ಷ ಇರಬೇಕು, ಆಡಳಿತ ಪಕ್ಷ ಇರಬೇಕು. ಆದರೆ ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕು, ಯಾವುದರಲ್ಲಿ ಮಾಡಬಾರದು ಎನ್ನುವ ಅರಿವು ಇರಬೇಕು” ಎಂದು ಹೇಳಿ ಟೀಕಾಕಾರರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಕನ್ನಡ ಪ್ರೀತಿಯ ಸ್ಪಷ್ಟನೆ

ಬಾನು ಮುಷ್ತಾಕ್ ಕನ್ನಡ ಬಾವುಟ ಮತ್ತು ಭಾಷಾ ಪ್ರೀತಿಯ ವಿಚಾರದಲ್ಲೂ ಸ್ಪಷ್ಟನೆ ನೀಡಿದರು. “ಕನ್ನಡವನ್ನು ನನ್ನಷ್ಟು ಬಳಕೆ ಮಾಡಿ, ನನ್ನಷ್ಟು ಪ್ರೀತಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ತಂದು ನಿಲ್ಲಿಸಿದ್ದೇನೆ. ನಾನೇ ಸಾಕ್ಷಿ, ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಡಲ್ಲ” ಎಂದು ಹೇಳಿದರು.

2023ರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಭಾಷಣದ ತುಣುಕು ತಿರುಚಿ ಆರೋಪ ಮಾಡುತ್ತಿರುವವರ ಬಗ್ಗೆ ಮಾತನಾಡಿದ ಅವರು, “ಭಾಷೆಯನ್ನು ದೇವತೆಯಂತೆ ಆರಾಧನೆ ಮಾಡಬೇಡಿ, ಭಾಷೆಯಾಗಿ ಬಳಸೋಣ. ಪ್ರಶ್ನಿಸದೆ ಕಲಿಯಲು, ಬಳಸಲು ಪ್ರಯತ್ನಿಸೋಣ” ಎಂದು ತಿರುಗೇಟು ನೀಡಿದರು.

ಬಿಜೆಪಿ ಪಕ್ಷದಲ್ಲಿ ಮೈಸೂರಿನ ಸಂಸದ ಯದುವೀರ್ ಅಂತಹವರ ಸಂತತಿ ಹೆಚ್ಚಾಗಲಿ ಎಂದು ಅಪೇಕ್ಷೆ ಪಡುತ್ತೇನೆ . ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದೆ ಹೇಳಿಕೆ ನೀಡಬೇಕು. ಅಂತಹ ವಿದ್ಯಾವಂತ ಸುಸಂಸ್ಕೃತ ಮನಸುಗಳಿಗೆ ಮಾತ್ರ ಸಾಧ್ಯ. ಬೂಕರ್ ಅಂತಹ ಪ್ರಶಸ್ತಿ ಸಿಗೋದು ಸುಲಭದ ಮಾತಲ್ಲ. ಅದರ ಬಗ್ಗೆಯೂ ಒಂದಿಬ್ಬರು ಬಹಳ ಕೇವಲವಾಗಿ ಮಾತನಾಡುತ್ತಾರೆ. ಅದರ ಬಗ್ಗೆ ನನಗೆ ಬೇಜಾರಿಲ್ಲ. ಅವರವರ ಮಟ್ಟಕ್ಕೆ ತಕ್ಕಹಾಗೆ ಮಾತಾಡ್ತಾರೆ ಮಾತಾಡಲಿ ಎಂದು ಟಾಂಗ್ ಕೊಟ್ಟರು.

ಕುಟುಂಬದ ಕನ್ನಡ ನಿಷ್ಠೆ

ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ತಾವು ಮಾಡಿದ ಪಾತ್ರವನ್ನು ನೆನೆಸಿಕೊಂಡ ಬಾನು ಮುಷ್ತಾಕ್, “ನನ್ನ ಮೂವರು ಹೆಣ್ಣು ಮಕ್ಕಳು ಕನ್ನಡ ಶಾಲೆಯಲ್ಲಿ ಓದಿದ ಕಾರಣ ನಾನು ಹಾಸನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಏಕೈಕ ಮಹಿಳೆ. ಕನ್ನಡದ ಮೇಲಿನ ನನ್ನ ನಿಷ್ಠೆಯನ್ನು ತಿರುಚಿ ಹೇಳುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಬೂಕರ್ ಪ್ರಶಸ್ತಿಯ ಗೌರವ

ಬೂಕರ್ ಪ್ರಶಸ್ತಿ ಪಡೆದ ನಂತರ ಕನ್ನಡಿಗರಿಂದ ತಮಗೆ ಅಪಾರ ಸಂತಸ ಹಾಗೂ ಗೌರವ ದೊರೆತಿರುವುದಾಗಿ ತಿಳಿಸಿದ ಅವರು, “ಇದು ನನಗೆ ಮಾತ್ರ ಸಿಕ್ಕ ಪ್ರಶಸ್ತಿ ಅಲ್ಲ, ಕನ್ನಡಿಗರೆಲ್ಲರಿಗೂ ಬಂದ ಪ್ರಶಸ್ತಿ. ಕರ್ನಾಟಕ ಸರ್ಕಾರ ಹಾಗೂ ಜನರಿಂದ ಸಿಕ್ಕ ಗೌರವಕ್ಕೆ ಹೃತ್ಪೂರ್ವಕ ಧನ್ಯವಾದಗಳು” ಎಂದರು.

ರಾಜಕೀಯ ವಿವಾದದ ನಡುವೆ ಬಾನು ಮುಷ್ತಾಕ್ ಸಂದೇಶ

ದಸರಾ ಉದ್ಘಾಟಕರ ಆಯ್ಕೆ ವಿಚಾರದಲ್ಲಿ ನಡೆಯುತ್ತಿರುವ ವಿವಾದದ ನಡುವೆ ಬಾನು ಮುಷ್ತಾಕ್ ನೀಡಿದ ಸ್ಪಷ್ಟನೆ, ವಿರೋಧಿಗಳನ್ನು ಗುರಿಯಾಗಿಸಿಕೊಂಡರೂ, ಕನ್ನಡಿಗರ ಪ್ರೀತಿ-ಆಶೀರ್ವಾದವನ್ನು ತನ್ನ ಬಲವೆಂದು ಘೋಷಿಸಿದಂತಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!