ಪುತ್ತೂರು, ಆ.29:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ “ಬದಲಾವಣೆಗಾಗಿ ಕೊಡುಗೆ” ಎಂಬ ಘೋಷವಾಕ್ಯದೊಂದಿಗೆ ನಾಯಕರ ಸಭೆ ಪುತ್ತೂರು ಎಂ.ಡಿ.ಎಸ್ ಸಭಾಂಗಣದಲ್ಲಿ ಜರುಗಿತು.
ಸಭೆಗೆ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ಅಧ್ಯಕ್ಷತೆ ವಹಿಸಿದರು.
ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, “ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಿ ಜನರ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡಿ ಹತ್ತಿರವಾಗಬೇಕು” ಎಂದು ಕರೆ ನೀಡಿದರು.
ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ, “ಅಧಿಕಾರದಲ್ಲಿರುವ ಪಕ್ಷಗಳು ಕಾರ್ಪೊರೇಟ್ ಕುಳಗಳನ್ನು ಮೆಚ್ಚಿಸುತ್ತಿವೆ. ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಮುಸ್ಲಿಮರು ಹಾಗೂ ಹಿಂದುಳಿದ ವರ್ಗದವರು ಬಿಜೆಪಿ ಕೋಮು ರಾಜಕೀಯದ ದಾಳಿಗೆ ಒಳಗಾಗುತ್ತಿದ್ದಾರೆ, ಕಾಂಗ್ರೆಸ್ ಕೂಡಾ ದ್ರೋಹದ ರಾಜಕೀಯ ಮಾಡುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಉಪಾಧ್ಯಕ್ಷ ಸುಲೈಮಾನ್ ಬಿ.ಕೆ, ಕಾರ್ಯದರ್ಶಿ ಉಸ್ಮಾನ್ ಎ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿ ಜೊತೆ ಕಾರ್ಯದರ್ಶಿ ರಹೀಂ ಪುತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.














