
ಬೆಂಗಳೂರು :ಬಿಜೆಪಿ ಆಡಳಿತಾವಧಿಯಲ್ಲಿ ನಡೆದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಇದು ಕಾಂಗ್ರೆಸ್–ಬಿಜೆಪಿ ಹೊಂದಾಣಿಕೆ ರಾಜಕಾರಣದ ಭಾಗವೇ ಸರಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ಆರೋಪಿಸಿದ್ದಾರೆ.
ಸೆಪ್ಟೆಂಬರ್ 16ರಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡುತ್ತಾ, “ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ, ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗ ಹಾಗೂ ಎಚ್.ಎನ್. ನಾಗಮೋಹನ ದಾಸ್ ಆಯೋಗ ನೀಡಿದ ವರದಿಗಳ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಉದ್ದೇಶಪೂರ್ವಕ ನಿರ್ಲಕ್ಷ್ಯತೆ ತೋರಿಸುತ್ತಿದೆ” ಎಂದು ಖಂಡಿಸಿದರು.
ಡಿ’ಕುನ್ಹಾ ಆಯೋಗವು, ಕೋವಿಡ್ ಅವಧಿಯಲ್ಲಿ 176 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಮತ್ತು 128 ಕೋಟಿ ರೂಪಾಯಿಯನ್ನು ಗುತ್ತಿಗೆದಾರರು, ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದ ವಸೂಲು ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಆದರೂ ಸಹ ಕ್ರಮ ಕೈಗೊಳ್ಳದಿರುವುದು ಭ್ರಷ್ಟ ಪಕ್ಷಗಳ ಹೊಂದಾಣಿಕೆ ರಾಜಕಾರಣವನ್ನು ಸಾಬೀತುಪಡಿಸುತ್ತದೆ ಎಂದು ಪಾಷಾ ಆರೋಪಿಸಿದರು.
ಅವರು ಮುಂದುವರಿದು, “ಕೋವಿಡ್ ಸಮಯದಲ್ಲಿ ಜನರು ಆಮ್ಲಜನಕ, ಔಷಧಿ, ಹಾಸಿಗೆಗಳ ಕೊರತೆಯಿಂದ ಸಂಕಷ್ಟದಲ್ಲಿದ್ದಾಗಲೂ ಅಧಿಕಾರಿಗಳು PPE ಕಿಟ್‌ಗಳನ್ನು ಹೆಚ್ಚುವರಿ ದರದಲ್ಲಿ ಖರೀದಿಸಿ, ಕಪ್ಪುಪಟ್ಟಿಯ ಲ್ಯಾಬ್‌ಗಳಿಗೆ ಟೆಂಡರ್ ನೀಡಿ, ನಿಧಿ ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಕೇವಲ ಭ್ರಷ್ಟಾಚಾರವಲ್ಲ, ಜನರ ಜೀವದೊಂದಿಗೆ ನಡೆದ ದೊಡ್ಡ ದ್ರೋಹ” ಎಂದು ಆಕ್ರೋಶ ವ್ಯಕ್ತಪಡಿಸಿದರು.
SDPI ಪಕ್ಷದ ಆಗ್ರಹಗಳು:
1. ವರದಿಗಳಲ್ಲಿ ಹೆಸರುಗಳಿರುವ ಎಲ್ಲಾ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
2. ಕೋವಿಡ್ ಸಮಯದಲ್ಲಿ ನಡೆದ ಸಾವಿರಾರು ಕೋಟಿ ಲೂಟಿ ಮಾಡಿದ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು.
3. ರಾಜಕೀಯ ಹಸ್ತಕ್ಷೇಪವಿಲ್ಲದ ನಿಷ್ಪಕ್ಷಪಾತ ತನಿಖೆಗಾಗಿ ಹಾಗೂ ತ್ವರಿತ ತೀರ್ಪಿಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.
“ನ್ಯಾಯ ವಿಳಂಬವಾಗುವುದು ಎಂದರೆ ನ್ಯಾಯ ನಿರಾಕರಣೆ. ಆದ್ದರಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಮುಜಾಹಿದ್ ಪಾಷಾ ಆಗ್ರಹಿಸಿದರು.






