
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ 5 ವಿವಿಧ ಕಡೆಗಳಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಅವರ ಮನವಿಯ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟು 5.70 ಕೋಟಿ ರೂ. ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.
ಸದ್ಯ ಮಂಜೂರುಗೊಂಡಿರುವ ಕಿಂಡಿಅಣೆಕಟ್ಟುಗಳು ಈ ಭಾಗದ ಜನರ ದೀರ್ಘಕಾಲದ ಬೇಡಿಕೆ ಆಗಿತ್ತು. ಹಲವು ವರ್ಷಗಳಿಂದ ಸ್ಥಳೀಯರು ಹೋರಾಟ ನಡೆಸುತ್ತಿದ್ದ ವಿಷಯವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಶೋಕ್ ರೈ ಅವರು ಈ ಅಣೆಕಟ್ಟುಗಳನ್ನು ಮಂಜೂರು ಮಾಡುವ ಭರವಸೆ ನೀಡಿದ್ದರು. ಆ ಭರವಸೆ ಈಡೇರಿದೆ.
ಅಣೆಕಟ್ಟು ನಿರ್ಮಾಣವಾಗುವ ಸ್ಥಳಗಳು
ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಲ್ತಾಡಿಗೆ — ರೂ. 90 ಲಕ್ಷ
ಮುಡ್ನೂರು ಗ್ರಾಮದ ಕರ್ನೂರು ಗುತ್ತು ಕಾಲನಿ — ರೂ. 70 ಲಕ್ಷ
ಬಂಟ್ವಾಳ ತಾಲೂಕಿನ ಪುಣಚಾ ಗ್ರಾಮದ ದೇವರಗುಂಡಿ — ರೂ. 130 ಲಕ್ಷ
ಕೆಯ್ಯೂರು ಗ್ರಾಮದ ದೇರ್ಲ — ರೂ. 125 ಲಕ್ಷ
ಬಂಟ್ವಾಳ ತಾಲೂಕು ವಿಟ್ಲ ಗ್ರಾಮದ ನೆಕ್ಕಿಕಾರ್ — ರೂ. 150 ಲಕ್ಷ
ಒಟ್ಟಾರೆ 5 ಕಡೆಗಳಲ್ಲಿ 5.70 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣವಾಗಲಿದೆ.
“ಸಣ್ಣ ನೀರಾವರಿ ಇಲಾಖೆಯಿಂದ ನನ್ನ ಕ್ಷೇತ್ರ ವ್ಯಾಪ್ತಿಯ 5 ಕಿಂಡಿಅಣೆಕಟ್ಟಿಗೆ 5.70 ಕೋಟಿ ರೂ. ಅನುದಾನ ಮಂಜೂರಾಗಿದೆ. ಜನರ ದೀರ್ಘಕಾಲದ ಬೇಡಿಕೆ ಈಡೇರಿದ ಖುಷಿಯಿದೆ. ಈ ಅನುದಾನ ಮಂಜೂರು ಮಾಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಹಲವು ಬೇಡಿಕೆಗಳನ್ನು ಶೀಘ್ರದಲ್ಲೇ ಸರಕಾರದ ಗಮನಕ್ಕೆ ತಂದು, ಅನುಷ್ಠಾನಗೊಳಿಸುವುದು ನನ್ನ ಉದ್ದೇಶ” ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.






